ಬೆಂಗಳೂರು: ನಗರದ ಚಿತ್ರಮಂದಿರಕ್ಕೆ ಆಗಮಿಸಿದ ಸಿನಿಮಾ ಪ್ರೇಮಿಗಳಿಗೆ ಅಚ್ಚರಿ ಕಾದಿತ್ತು ಥಿಯೇಟರ್ ದ್ವಾರದಲ್ಲೇ ಹೂ ನೀಡಿ ಬರಮಾಡಿಕೊಳ್ಳುವ ವಿಶೇಷ ಪ್ರಯತ್ನ ನಡೆಯಿತು.
ಹರಿವು, ನಾತಿಚರಾಮಿ ಸಿನಿಮಾದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ‘ಆಕ್ಟ್ 1978’ ಶುಕ್ರವಾರ ಬಿಡುಗಡೆಯಾಗಿದ್ದು, ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.
ಕೋವಿಡ್ ನಿಂದ ಥಿಯೇಟರ್ ಗಳು ನಿಧಾನವಾಗಿ ತೆರೆದುಕೊಳ್ಳುತ್ತಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಆಕ್ಟ್ 1978 ಸಿನೆಮಾ ತನ್ನ ವಿಭಿನ್ನ ರೀತಿಯ ಪೋಸ್ಟರ್ ಗಳ ಮೂಲಕವೇ ಸದ್ದು ಮಾಡಿತ್ತು, ಚಿತ್ರದ ಶೀರ್ಷಿಕೆ ಕುತೂಹಲ ಮೂಡಿಸಿತ್ತು, ಇದೀಗ ಸಿನಿಮಾ ನೋಡಿದ ಸಿನಿಮಾ ರಂಗದ ಮಂದಿ ಹಾಗೂ ಪ್ರೇಕ್ಷಕರು ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
‘ಆಕ್ಟ್ 1978’ ಲಾಕ್‌ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಮೊದಲ ಕನ್ನಡ ಸಿನಿಮಾವಾಗಿರುವುದರಿಂದ ಪ್ರೇಕ್ಷಕರ ಪ್ರತಿಕ್ರೀಯೆ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿತ್ತು. ಈ ಥ್ರಿಲ್ಲರ್ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಯಜ್ಞಾಶೆಟ್ಟಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಮೊದಲಾದವರು ಪಡಿಸಿದ್ದಾರೆ.
ಚಿತ್ರರಂಗದ ಗಣ್ಯರಿಗಾಗಿ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಏರ್ಪಡಿಸಿದ್ದು, ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ತಂತ್ರಜ್ಞರು ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.