ಜವಾಬ್ದಾರಿಯುತ ‌ನಾಗರೀಕನಾಗುವುದು ಅಗತ್ಯ: ವಸಂತ ಬಂಗೇರ

ಬೆಳ್ತಂಗಡಿ : ಉನ್ನತವಾದ ಶಿಕ್ಷಣದೊಂದಿಗೆ ಜವಾಬ್ಧಾರಿಯುತ ನಾಗರಿಕನಾಗಿ ಬೆಳೆಯುವುದು ವಿದ್ಯಾರ್ಥಿಗಳ ಗುರಿಯಾಗಿರಬೇಕು. ಉತ್ತಮವಾದ ವಿದ್ಯಾಭ್ಯಾಸವನ್ನು ನೀಡುವುದು ಹೆತ್ತವರು ತನ್ನ ಮಕ್ಕಳಿಗೆ ನೀಡುವ ಬಹುದೊಡ್ಡ ಆಸ್ತಿಯಾಗುತ್ತದೆ ಎಂದು ಮಾಜಿ ಶಾಸಕ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ಬೆಳ್ತಂಗಡಿ ಹಾಗೂ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ(ರಿ) ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿವೇತನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದೇ ಗುರಿಯಾಗಿರಬೇಕು. ರಾಜಕೀಯ ಪ್ರೇರಿತವಾದ ಸಂಘಟನೆಗಳೆಡೆಗೆ ಮನಸ್ಸು ನೀಡಿದರೆ ನಿಜವಾದ ಗುರಿ ಸಾಧನೆ ಬದಿಗೆ ಸರಿದು ಅತಂತ್ರ ಬದುಕು ನಿರ್ಮಾಣವಾಗುತ್ತದೆ. ಹಾಗಾಗಿ ಹೆತ್ತವರು ಮಕ್ಕಳ ಚಲನವಲನಗಳ ಮೇಲೆ ಸದಾ ಗಮನಹರಿಸಬೇಕು ಎಂದರು.
ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಮಾತನಾಡಿ, ಸಮಾಜದ ಅರ್ಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ದತ್ತು ತೆಗೆದುಕೊಳ್ಳುವ ಕಾರ್ಯವನ್ನು ಈ ವರ್ಷ ಮಾಡಲಾಗಿದೆ. ಇದರಿಂದ ಆ ಕುಟುಂಬದ ವಿದ್ಯಾರ್ಥಿಗಳಿಗೆ ಸಂಘ ಆಧಾರವಾಗಿ ನಿಂತಂತಾಗುತ್ತದೆ. ಸಂಘದಿಂದ ಪ್ರಯೋಜನ ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮವಾದ ಉದ್ಯೋಗವನ್ನು ಪಡೆದುಕೊಂಡಾಗ ಸಂಘಕ್ಕೆ ಆಧಾರವಾಗಿ ನಿಲ್ಲುವಂತಾಗಬೇಕು ಎಂದರು.
ಸಂಘದ ವತಿಯಿಂದ ರೂ. 5 ಲಕ್ಷ 88 ಸಾವಿರ ಮೊತ್ತದಲ್ಲಿ 2 ವರ್ಷಗಳ ಅವಧಿಗೆ 26 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಹಾಗೂ 58 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ 28 ವಿದ್ಯಾರ್ಥಿಗಳಿಗೆ ರೂ. 2.37 ಲಕ್ಷ ರೂ. ವನ್ನು ವಿದ್ಯಾರ್ಥಿ ವೇತನವಾಗಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ 43 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿದ ನಾರಾವಿ ಡೊಂಕಬೆಟ್ಟು ಬಿರ್ವ ಚಾರಿಟೇಬಲ್ ಟ್ರಸ್ಟ್‍ನ ವೀರಮ್ಮ ಸಂಜೀವ ಸಾಲಿಯಾನ್ ಮತ್ತು ಮಕ್ಕಳನ್ನು ಸನ್ಮಾನಿಸಲಾಯಿತು.
ಮಂಜುಶ್ರೀ ಜೇಸಿಐ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಬಿರ್ವ ಚಾರಿಟೇಬಲ್ ಟ್ರಸ್ಟ್ ನ ವೀರಮ್ಮ ಸಂಜೀವ ಸಾಲಿಯಾನ್, ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಸಂಘದ ಮಾಜಿ ಅಧ್ಯಕ್ಷರಾದ ಭಗೀರಥ ಜಿ, ಜಯರಾಮ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಸೇರಿದಂತೆ ಸಂಘದ ನಿರ್ದೇಶಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಮನೋಹರ್ ಇಳಂತಿಲ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನಾರಾಯಣ ಸುವರ್ಣ ಸ್ವಾಗತಿಸಿದರು. ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ಡಾ. ಪ್ರವೀಣ್ ವಂದಿಸಿದರು.

error: Content is protected !!