ವೃತ್ತಿಯಲ್ಲಿ ಪ್ರೀತಿ ಇದ್ದಾಗ ಆತ್ಮಸಾಕ್ಷಿಯಾಗಿ ನೆಮ್ಮದಿ ಸಿಗುತ್ತದೆ,ಧನಂಜಯ ರಾವ್

 

ಬೆಳ್ತಂಗಡಿ : ಕಾರ್ಮಿಕ ಇಲಾಖೆ ಎಂಬುದು ದೇಶದ ಪ್ರಮುಖ ಅಂಗ. ಇವರ ಸೇವೆ ಅಪಾರವಾದುದು. ರಾತ್ರಿ ಹಗಲೆನ್ನದೆ ಶ್ರಮಿಸಿ ಸುಂದರ ಪರಿಸರವನ್ನು ನಿರ್ಮಿಸುವವರು. ಇವರ ನೋವಿಗೆ ಸದಾ ಸ್ಪಂದಿಸುತ್ತೇನೆ ಎಂದು ಬೆಳ್ತಂಗಡಿ ತಹಶಿಲ್ದಾರ್ ಮಹೇಶ್ ಜೆ ತಿಳಿಸಿದರು.
ಅವರು  ಬೆಳ್ತಂಗಡಿ ನ.ಪಂ ವತಿಯಿಂದ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಿ ಮಾತನಾಡಿದರು.
ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ನ್ಯಾಯವಾದಿ ಧನಂಜಯ ರಾವ್ ಮಾತನಾಡಿ ವೃತ್ತಿ ಎಂಬುದು ಹುಟ್ಟಿದಾಗ ಬರುವುದಲ್ಲ ಮತ್ತೆ ನಾವು ಅದನ್ನು ಆಯ್ಕೆಮಾಡಿಕೊಳ್ಳುವುದು. ವೃತ್ತಿ ಪ್ರೀತಿಯ ಸಂಕೇತವಾಗಿದೆ. ವೃತ್ತಿಯಲ್ಲಿ ಪ್ರೀತಿ ಇದ್ದಾಗ ಆತ್ಮಸಾಕ್ಷಿಯಾಗಿ ನೆಮ್ಮದಿ ಸಿಗುವುದಲ್ಲದೆ ವೃತ್ತಿ ಗೌರವವೂ ಸಿಗುತ್ತದೆ. ವೃತ್ತಿಯಲ್ಲಿ ಸಮಯಪಾಲನೆ ಅಗತ್ಯ. ಅದರಲ್ಲಿ ನಮ್ಮ ಪ್ರೀತಿ, ಗೌರವ ಕಂಡಾಗ ಇಡೀ ಸಮಾಜವೇ ಗೌರವಿಸುತ್ತದೆ. ಇಂದು ಕೆಲವು ವೃತ್ತಿಗಳಿಗೆ ಸಮವಸ್ತ್ರ ಧರಿಸಿದಾಗ ಅದಕ್ಕೆ ಸಿಗುವ ಗೌರವವೇ ಬೇರೆ. ವೃತ್ತಿಯಲ್ಲಿ ನಾವು ಧರಿಸುವ ಸಮವಸ್ತ್ರ ವಾಗಲಿ ಇನ್ನಿತರ ಬಟ್ಟೆಬರೆಗಳನ್ನು ಸ್ವಚ್ಚ ಮತ್ತು ಗೌರವ ರೀತಿಯಲ್ಲಿ ಧರಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು ಎಂದರು. ಇಂದು ಕಾರ್ಮಿಕರ ಸೇವೆಯನ್ನು ಒಂದು ಕ್ಷಣದಲ್ಲಿ ಪ್ರತಿಯೊಬ್ಬರೂ ಯೋಚಿಸುವ ಅಗತ್ಯವಿದೆ. ಒಂದು ದಿನ ಸ್ವಚ್ಚ ಮಾಡದಿದ್ದರೆ ನಮಗೆ ಮೂಗು ಬಿಡಲು ಸಾಧ್ಯವಾಗುತ್ತಿಲ್ಲ. ಪೌರ ಕಾರ್ಮಿಕರು ಅವರ ಸೇವೆಯನ್ನು ಮಾಡದಿದ್ದರೆ ಇಂದು ಮಾಸ್ಕ್ ಮಾತ್ರ ಧರಿಸುವ ಬದಲು ಇಡೀ ದೇಹಕ್ಕೆ ಮಾಸ್ಕ್ ಹಾಕುವ ಸ್ಥಿತಿ ಬರಬಹುದು ಅದಕ್ಕಾಗಿ ಪೌರಕಾರ್ಮಿಕರನ್ನು ಗುರುತಿಸೋಣ ಎಂದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತೀಯೊಬ್ಬ ಶ್ರೇಷ್ಠ ವ್ಯಕ್ತಿಗಳಿಗೂ ಪ್ರತಿಯೊಬ್ಬ ಸೇವಕರಿಗೂ ಒಂದು ದಿನ ಎಂಬುದಿರುತ್ತದೆ ಈ ದಿನದಲ್ಲಿ ಅವರನ್ನು ಗುರುತಿಸಿದರೆ ಇಡೀ ಸಮಾಜವೇ ಅವರನ್ನು ಗುರುತಿಸಿದಂತಾಗುತ್ತದೆ. ಇಂದು ಪೌರ ಕಾರ್ಮಿಕರ ದಿನ ಅವರನ್ನು ಇಂದು ನಾವು ಗುರುತಿಸಿ ಅವರೊಂದಿಗೆ ಒಂದು ದಿನ ಕಳೆಯುವುದೆಂದರೆ ಅದು ಅತ್ಯಂತ ಸಂತಸದ ದಿನ ಆದರೆ ಅವರ ಸೇವೆ ಆ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ನಿರಂತರವಾಗಿರುತ್ತದೆ. ಪಟ್ಟಣ ಪಂಚಾಯತ್ ವ್ಯಾಪ್ತಿಗೆ 700 ಜನರಿಗೆ ಒಬ್ಬರಾಗಿ ಪೌರ ಕಾರ್ಮಿಕರಿದ್ದು ಇವರ ಸೇವೆಯನ್ನು ಪಟ್ಟಣ ಪಂಚಾಯತ್ ಎಂದೂ ಸ್ಮರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ನ.ಪಂ ಚುನಾಯಿತ ಸದಸ್ಯರಾದ ಜಯನಂದ ಗೌಡ, ಶರತ್, ರಜನಿ ಕುಡ್ವ, ಲೋಕೇಶ್, ಇಂಜಿನಿಯರ್ ಮಹಾವೀರ ಅರಿಗ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನ.ಪಂ ಶಹರಿ ರೋಜ್‌ಗಾರ್ ಯೋಜನೆಯ ಯೋಜನಾಧಿಕಾರಿ ವೆಂಕಟರಮಣ ಶರ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
error: Content is protected !!