
ಬೆಳ್ತಂಗಡಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ನಿವೇಶನ ಹೊಂದಿರುವ ನಾಗರಿಕರಿಗೆ ಮನೆ ನಿರ್ಮಾಣ ಹಾಗೂ ಲೇಔಟ್ ಅನುಮೋದನೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ, 1,000 ಚದರ ಮೀಟರ್‌ವರೆಗಿನ ಏಕ ನಿವೇಶನದ ಲೇಔಟ್ ಪ್ಲಾನ್‌ಗಳನ್ನು ಅನುಮೋದಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೀಡಿರುವ ರಾಜ್ಯ ಸರ್ಕಾರದ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲಾ ಸ್ವಾಗತಿಸಿದ್ದಾರೆ.
ಈ ಆದೇಶದಂತೆ 1,000 ಚದರ ಮೀಟರ್ ಒಳಗಿನ ಏಕ ನಿವೇಶನದ ಲೇಔಟ್ ಪ್ಲಾನ್ ಅರ್ಜಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಪಿಡಿಒ ಅವರೇ ಪರಿಶೀಲಿಸಲಿದ್ದಾರೆ. ಜಾಗದ ನಕ್ಷೆ, ಮಾಲೀಕತ್ವದ ದಾಖಲೆಗಳು ಹಾಗೂ ನಿವೇಶನದ ಗಡಿಗಳನ್ನು ಪಿಡಿಒ ಮತ್ತು ತಾಂತ್ರಿಕ ಸಿಬ್ಬಂದಿ ನಿಯಮಾನುಸಾರ ಪರಿಶೀಲಿಸಿದ ಬಳಿಕ, ಲೇಔಟ್ ಪ್ಲಾನ್‌ಗೆ ಅನುಮೋದನೆ ನೀಡಿ ಈ-ಸ್ವತ್ತು ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಕಡತಗಳನ್ನು ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಕಳುಹಿಸುವ ಅಗತ್ಯ ಕಡಿಮೆಯಾಗಲಿದ್ದು, ಅನುಮೋದನೆ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಮಧ್ಯವರ್ತಿಗಳ ಅನಗತ್ಯ ಹಸ್ತಕ್ಷೇಪಕ್ಕೆ ಕಡಿವಾಣ ಬೀಳುವುದರ ಜೊತೆಗೆ, ಗ್ರಾಮೀಣ ಜನರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿಯೂ ತಪ್ಪಲಿದೆ.
ಈ ಹಿಂದೆ ಸಣ್ಣ ಪ್ರಮಾಣದ ನಿವೇಶನಗಳಿಗೂ ಏಕ ನಿವೇಶನ ಅನುಮೋದನೆ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರ, ಯೋಜನಾ ಪ್ರಾಧಿಕಾರ ಅಥವಾ ಮೂಡಾ ಹಂತದ ಅಧಿಕಾರಿಗಳ ಕಚೇರಿಗಳಿಗೆ ತೆರಳಬೇಕಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಗ್ರಾಮೀಣ ಜನರಿಗೆ ಅನುಕೂಲಕರವಾಗಲಿದೆ.
ಈ ಮಹತ್ವದ ನಿರ್ಧಾರವನ್ನು ಕೈಗೊಂಡ ರಾಜ್ಯ ಸರ್ಕಾರವನ್ನು , ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.