1,000 ಚ.ಮೀ.ವರೆಗಿನ ಸಿಂಗಲ್‌ ಪ್ಲಾಟ್‌ ನಕ್ಷೆ ಮಂಜೂರಾತಿ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ: ಬಿಜೆಪಿ ಹೋರಾಟದ ಫಲ 

 

 

ಬೆಳ್ತಂಗಡಿ: ಸಾಮಾನ್ಯ ನಾಗರಿಕರು ಹಾಗೂ ಸಣ್ಣ ಆಸ್ತಿ ಮಾಲೀಕರು ನಕ್ಷೆ ಮಂಜೂರಾತಿ ಮತ್ತು ಲೇಔಟ್‌ ಪ್ಲಾನ್‌ ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಬಿಜೆಪಿಯ ಹೋರಾಟದ ಪ್ರತಿಫಲ ಎಂದು ಬೆಳ್ತಂಗಡಿ ಬಿಜೆಪಿ ಮಂಡಲ ತಿಳಿಸಿದೆ.

ಕರ್ನಾಟಕ ಸರ್ಕಾರವು ಸೆ.24ರಂದು ಹೊರಡಿಸಿರುವ ನೂತನ ಅಧಿಸೂಚನೆಯಂತೆ, 1,000 ಚದರ ಮೀಟರ್‌ವರೆಗಿನ ‘ಸಿಂಗಲ್‌ ಪ್ಲಾಟ್‌’ ನಕ್ಷೆ ಮಂಜೂರಾತಿ ನೀಡುವ ಅಧಿಕಾರವನ್ನು ಮಹಾನಗರ ಪಾಲಿಕೆಗಳ ವಲಯ ಆಯುಕ್ತರು, ನಗರಸಭೆ ಆಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಗೆ ವಿಕೇಂದ್ರೀಕರಿಸಲಾಗಿದೆ ಎಂದು ಪಕ್ಷ ತಿಳಿಸಿದೆ.

ಸಣ್ಣ ನಿವೇಶನಗಳಲ್ಲಿ ಮನೆ ನಿರ್ಮಾಣ ಅಥವಾ ಸಣ್ಣ ಲೇಔಟ್‌ಗಳಿಗೆ ನಕ್ಷೆ ಮಂಜೂರಾತಿ ಪಡೆಯಲು ಸಾರ್ವಜನಿಕರು ನಗರಾಭಿವೃದ್ಧಿ ಪ್ರಾಧಿಕಾರಗಳ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇತ್ತು. ಈ ವ್ಯವಸ್ಥೆಯನ್ನು ಸರಳೀಕರಿಸಿ ಆಡಳಿತವನ್ನು ಜನರ ಬಳಿಗೆ ತರುವಂತೆ ಬಿಜೆಪಿ ನಿರಂತರ ಸತ್ಯಾಗ್ರಹ, ಬೀದಿ ಹೋರಾಟ ಹಾಗೂ ಸಾರ್ವಜನಿಕ ಒತ್ತಡದ ಮೂಲಕ ಆಗ್ರಹಿಸಿತ್ತು .

ಸರ್ಕಾರದ ನೂತನ ನಿರ್ಧಾರವು ಬಿಜೆಪಿ ನಡೆಸಿದ ಸಂಘಟಿತ ಹೋರಾಟದ ಫಲವಾಗಿದ್ದು, ಇದರಿಂದ ಸಾಮಾನ್ಯ ನಾಗರಿಕರು, ರೈತರು ಹಾಗೂ ಸಣ್ಣ ಉದ್ಯಮಿಗಳಿಗೆ ನಕ್ಷೆ ಮಂಜೂರಾತಿ ಪ್ರಕ್ರಿಯೆಯಲ್ಲಿ ಅನುಕೂಲವಾಗಲಿದೆ ಎಂದು ಬೆಳ್ತಂಗಡಿ ಬಿಜೆಪಿ ಮಂಡಲ ಅಭಿಪ್ರಾಯಪಟ್ಟಿದೆ.

“ಜನಸಾಮಾನ್ಯರ ಹಕ್ಕುಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಲಿದೆ. ಆಡಳಿತವನ್ನು ಜನರ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ,” ಎಂದು ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!