
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ದಿಂದ ಪೊಲೀಸ್ ಅಧಿಕಾರಿಗಳಾದ ಶಶಿಕುಮಾರ್ ಹಾಗೂ ತನಿಖಾ ತಂಡದ ಸದಸ್ಯರಾದ ವೆಂಕಟೇಶ್ ಪ್ರಸನ್ನ ಅವರನ್ನು ಕೈಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
14 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣದ ಕುರಿತು ಈ ಹಿಂದೆ ನಡೆದ ಸಿಐಡಿ, ಸಿಬಿಐ ಹಾಗೂ ಎಸ್‌ಐಟಿ ತನಿಖೆಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹೊಸ ತನಿಖಾ ತಂಡದ ಮೂಲಕ ತನಿಖೆ ನಡೆಸಲು ಆದೇಶಿಸಲಾಗಿದೆ. ಇಂತಹ ಮಹತ್ವದ ಪ್ರಕರಣದ ತನಿಖೆಗೆ ಆರೋಪಗಳು ಅಥವಾ ಹಿಂದಿನ ತನಿಖೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಎದುರಿಸಿರುವ ಅಧಿಕಾರಿಗಳನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಶೇಖರ್ ಲಾಯಿಲ ಅಭಿಪ್ರಾಯಪಟ್ಟಿದ್ದಾರೆ.
ಶಶಿಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ, ಕರ್ತವ್ಯಲೋಪ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳಿವೆ ಎಂದು ಅವರು ಹೇಳಿದ್ದಾರೆ. ವೆಂಕಟೇಶ್ ಪ್ರಸನ್ನ ಅವರ ವಿರುದ್ಧವೂ ಭ್ರಷ್ಟಾಚಾರ, ಭೂಗತ ಪಾತಕಿಗಳೊಂದಿಗೆ ನಂಟು ಸೇರಿದಂತೆ ವಿವಿಧ ಆರೋಪಗಳಿದ್ದು, ಯುವ ನ್ಯಾಯವಾದಿ ನೌಶಾದ್ ಕಾಸಿಂಜಿ ಕೊಲೆ ಪ್ರಕರಣಕ್ಕೂ ಅವರ ಹೆಸರು ಸಂಬಂಧಿಸಿರುವುದಾಗಿ ಶೇಖರ್ ಲಾಯಿಲ ಆರೋಪಿಸಿದ್ದಾರೆ.
ಇಂತಹ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಗಳಿಂದ ವಸ್ತುನಿಷ್ಠ ಹಾಗೂ ಗುಣಮಟ್ಟದ ತನಿಖೆ ನಡೆಸುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವ ಸಾಧ್ಯತೆಯಿದೆ. ಹೀಗಾಗಿ ತನಿಖೆಯ ನಿಷ್ಪಕ್ಷಪಾತತೆ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ದೃಷ್ಟಿಯಿಂದ ಈ ಇಬ್ಬರು ಅಧಿಕಾರಿಗಳನ್ನು ಎಸ್‌ಐಟಿ ತಂಡದಿಂದ ತಕ್ಷಣ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
14 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರೆಯುವಂತಾಗಲು ರಾಜ್ಯದ ದಕ್ಷ, ಅನುಭವಿ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಬೇಕು. ತನಿಖೆಯ ಪ್ರತಿಯೊಂದು ಹಂತವೂ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿರಬೇಕು ಎಂದು ಶೇಖರ್ ಲಾಯಿಲ ಒತ್ತಾಯಿಸಿದ್ದಾರೆ.