
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ಸಿನಿಮೀಯ ರೀತಿಯಲ್ಲಿ ರ‍್ಯಾಗಿಂಗ್ ಮಾಡಿ, ಅಪಹರಿಸಿ ಕೊಠಡಿಯಲ್ಲಿ ಕೂಡಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೇರಳದ ತ್ರಿಶೂರ್ ಮೂಲದ 19 ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ 9 ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರುದಾರರ ಸಹಪಾಠಿಯೂ ಹಲ್ಲೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಂದು ಮಧ್ಯಾಹ್ನ ಇಬ್ಬರೂ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ಅಡ್ಡಗಟ್ಟಿ, ಬಲವಂತವಾಗಿ ಬೈಕ್‌ನಲ್ಲಿ ಕೂರಿಸಿಕೊಂಡು ನಿರ್ಜನ ಮನೆಯೊಂದಕ್ಕೆ ಕರೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೊಠಡಿಯಲ್ಲಿ ಇಬ್ಬರ ಬಟ್ಟೆಗಳನ್ನು ಬಿಚ್ಚಿಸಿ, ಬೆಲ್ಟ್ ಮತ್ತು ಹ್ಯಾಂಗರ್‌ನಿಂದ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಕಬ್ಬಿಣದ ಪಂಚ್‌ನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಹೊಡೆದಿದ್ದು, ಹಲ್ಲೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಹಲ್ಲೆಯಿಂದ ಬಳಲಿದ ವಿದ್ಯಾರ್ಥಿಗಳು ಕುಡಿಯಲು ನೀರು ಕೇಳಿದಾಗ ಕಲುಷಿತ ನೀರನ್ನು ನೀಡಿದ್ದು, ಅದನ್ನು ಕುಡಿಯಲು ನಿರಾಕರಿಸಿದಾಗ ಮೈಮೇಲೆ ಚೆಲ್ಲಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರ‍್ಯಾಗಿಂಗ್ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಚಾಕುವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೆಂದೂ ಆರೋಪಿಸಲಾಗಿದೆ.
ಸಂಜೆ 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಇರಿಸಿಕೊಂಡು ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾಲೇಜಿಗೆ ಮರಳಿದ ನಂತರವೂ ಕೆಲವು ನಿಯಮಗಳನ್ನು ಪಾಲಿಸುವಂತೆ ಬೆದರಿಕೆ ಹಾಕಿದ್ದರಿಂದ ಭಯಗೊಂಡ ವಿದ್ಯಾರ್ಥಿಗಳು ಊರಿಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೋಷಕರ ಧೈರ್ಯದ ಮೇರೆಗೆ ಮಂಗಳೂರಿಗೆ ಮರಳಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಾಸೀದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ. ಹಾಗೂ ಶಿನಾಸ್ ಎಂಬ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆ ಯತ್ನ, ಅಪಹರಣ, ಅಕ್ರಮ ಬಂಧನ, ಹಲ್ಲೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಡಿ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.