ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ‘ಸುಜ್ಞಾನನಿಧಿ’ ಆಸರೆ  ಇದುವರೆಗೆ 1.37 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ₹186.01 ಕೋಟಿ ನೆರವು

 

ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಆಶಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜಾರಿಗೊಳಿಸಲಾಗುತ್ತಿರುವ ‘ಸುಜ್ಞಾನನಿಧಿ ವಿದ್ಯಾರ್ಥಿವೇತನ’ ಕಾರ್ಯಕ್ರಮ ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ನೆರವಾಗುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯಲ್ಲಿ ವಿದ್ಯಾದಾನಕ್ಕೆ ವಿಶೇಷ ಸ್ಥಾನವಿದ್ದು, ಗ್ರಾಮೀಣ ಶಿಕ್ಷಣದ ಅಭಿವೃದ್ಧಿಗೆ ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಶಿಕ್ಷಣದ ಉನ್ನತಿಗಾಗಿ ಜ್ಞಾನ ದೀಪ ಶಿಕ್ಷಕರಿಗೆ ನೆರವು, ಶಾಲೆಗಳಿಗೆ ಬೆಂಚು–ಡೆಸ್ಕ್‌ಗಳ ವಿತರಣೆ, ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಅನುದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇವುಗಳ ಪೈಕಿ ‘ಸುಜ್ಞಾನನಿಧಿ ವಿದ್ಯಾರ್ಥಿವೇತನ’ ಪ್ರಮುಖ ಕಾರ್ಯಕ್ರಮವಾಗಿದೆ.

ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಮಕ್ಕಳು ಕೂಡ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ 2007ರಲ್ಲಿ ‘ಸುಜ್ಞಾನನಿಧಿ’ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಳೆದ ಸುಮಾರು 19 ವರ್ಷಗಳಲ್ಲಿ ಈ ಯೋಜನೆಯ ಮೂಲಕ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ತಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ಕಂಡುಕೊಂಡಿದ್ದಾರೆ.

ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣದ ವೆಚ್ಚವು ಸಾಮಾನ್ಯ ಶಿಕ್ಷಣಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಮಹತ್ವದ ನೆರವಾಗುತ್ತಿದೆ. ವಿಶೇಷವಾಗಿ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ಈ ಯೋಜನೆಯು ಉನ್ನತ ಶಿಕ್ಷಣದ ಅವಕಾಶವನ್ನು ಸುಲಭಗೊಳಿಸಿದೆ. ಆರ್ಥಿಕ ಕಾರಣಗಳಿಂದ ವೃತ್ತಿಪರ ಶಿಕ್ಷಣದಿಂದ ದೂರ ಉಳಿಯಬೇಕಾದ ಪರಿಸ್ಥಿತಿಯಲ್ಲಿದ್ದ ಅನೇಕ ವಿದ್ಯಾರ್ಥಿಗಳಿಗೆ ಈ ನೆರವು ಶಿಕ್ಷಣ ಮುಂದುವರಿಸಲು ಪ್ರೋತ್ಸಾಹ ನೀಡಿದೆ.

ಮಾಸಿಕ ವಿದ್ಯಾರ್ಥಿವೇತನದ ವಿಶೇಷತೆ

ಸಾಮಾನ್ಯವಾಗಿ ಹಲವು ವಿದ್ಯಾರ್ಥಿವೇತನಗಳು ವರ್ಷಕ್ಕೆ ಒಮ್ಮೆ ನೀಡಲಾಗುತ್ತವೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನನಿಧಿ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ವ್ಯಾಸಂಗದ ಅವಧಿಯಲ್ಲಿ ಪ್ರತಿ ತಿಂಗಳು ನೀಡಲಾಗುತ್ತಿರುವುದು ಯೋಜನೆಯ ಪ್ರಮುಖ ವಿಶೇಷತೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಧಿಯಲ್ಲಿ ನಿರಂತರ ಆರ್ಥಿಕ ಬೆಂಬಲ ದೊರೆಯುತ್ತದೆ.

 

ಗ್ರಾಮೀಣ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ: ವೀರೇಂದ್ರ ಹೆಗ್ಗಡೆ.

 

 

“ಗ್ರಾಮೀಣ ಮಕ್ಕಳು ವೃತ್ತಿಪರ ಶಿಕ್ಷಣದೊಂದಿಗೆ ಈ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಸುಜ್ಞಾನನಿಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಜ್ಞಾನನಿಧಿ ವಿದ್ಯಾರ್ಥಿವೇತನ ಪಡೆದು ಅನೇಕ ಗ್ರಾಮೀಣ ಪ್ರತಿಭೆಗಳು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ,” ಎಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ

 

2025–26ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 42,345 ವಿದ್ಯಾರ್ಥಿಗಳಿಗೆ ₹33.27 ಕೋಟಿ ವಿದ್ಯಾರ್ಥಿವೇತನ ಒದಗಿಸಲಾಗಿದೆ. ಇದುವರೆಗೆ ಒಟ್ಟು 1,37,165 ವಿದ್ಯಾರ್ಥಿಗಳಿಗೆ ₹186.01 ಕೋಟಿ ನೆರವು ನೀಡಲಾಗಿದೆ.

 

ಗ್ರಾಮೀಣ ಪ್ರತಿಭೆಗಳಿಗೆ ಉನ್ನತ ಶಿಕ್ಷಣದ ಅವಕಾಶ

ಸುಜ್ಞಾನನಿಧಿ ವಿದ್ಯಾರ್ಥಿವೇತನದ ನೆರವಿನಿಂದ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ಸಾಮಾನ್ಯ ಬಡ ಕುಟುಂಬದ ವಿದ್ಯಾರ್ಥಿಯೊಬ್ಬರು ಆರ್ಥಿಕ ಅಡಚಣೆಗಳನ್ನು ಮೀರಿ ಉನ್ನತ ಶಿಕ್ಷಣ ಪಡೆಯಲು ಈ ಕಾರ್ಯಕ್ರಮ ಪ್ರೇರಣೆಯಾಗಿದೆ.

 

ಶಿಕ್ಷಣಕ್ಕೆ  ಪ್ರೇರಣೆ ದೊರೆಯುತ್ತಿದೆ, ಅನಿಲ್ ಕುಮಾರ್.

 

 

 

ಈ ಕುರಿತು ಮಾತನಾಡಿರುವ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್. ಅವರು, ಸುಜ್ಞಾನನಿಧಿ ಕಾರ್ಯಕ್ರಮದ ಮೂಲಕ ಸಾಮಾನ್ಯ ಬಡ ಕುಟುಂಬದ ವಿದ್ಯಾರ್ಥಿಯೂ ಕೂಡ ಡಾಕ್ಟರ್, ಇಂಜಿನಿಯರ್ ಮೊದಲಾದ ಉನ್ನತ ಶಿಕ್ಷಣವನ್ನು ಪಡೆಯಲು ಪ್ರೇರಣೆ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಬದುಕಿನಲ್ಲಿ ನೆರವಾದ ವಿದ್ಯಾರ್ಥಿವೇತನ

ದಾವಣಗೆರೆಯ ವರ್ಷಾ ಜಿ.ವಿ. ಅವರು ತಮ್ಮ ಬಿ.ಇ. ಪದವಿ ಶಿಕ್ಷಣಕ್ಕೆ ಸುಜ್ಞಾನನಿಧಿ ವಿದ್ಯಾರ್ಥಿವೇತನ ನೆರವಾಗಿರುವುದನ್ನು ಸ್ಮರಿಸಿದ್ದಾರೆ. ಶಿಕ್ಷಣದ ಪಯಣದಲ್ಲಿ ಆರ್ಥಿಕ ನೆರವು ಅತ್ಯಂತ ಪ್ರಮುಖವಾಗಿದ್ದ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊರೆತ ಸಹಾಯವು ತಮ್ಮ ಬಿ.ಇ. ಪದವಿಯ ಕನಸನ್ನು ನನಸಾಗಿಸಲು ನೆರವಾಯಿತು ಎಂದು ಅವರು ತಿಳಿಸಿದ್ದಾರೆ. ತಮ್ಮ ಶಿಕ್ಷಣದ ಯಶಸ್ಸಿಗೆ ಕಾರಣವಾದ ನೆರವು ಮತ್ತು ಪ್ರೋತ್ಸಾಹಕ್ಕಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ಹೊಳಲ್ಕೆರೆಯ ಎಂ. ನಿತಿನ್ ಅವರು ಬಿ.ಇ. ವಿದ್ಯಾಭ್ಯಾಸಕ್ಕಾಗಿ ಸುಜ್ಞಾನನಿಧಿ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ಸರಿಯಾದ ಸಮಯಕ್ಕೆ ಪಡೆದಿದ್ದು, ಕಷ್ಟದ ಸಂದರ್ಭದಲ್ಲಿ ಶಿಕ್ಷಣ ಮುಂದುವರಿಸಲು ಅದು ಪ್ರೋತ್ಸಾಹ ನೀಡಿತು ಎಂದು ಹೇಳಿದ್ದಾರೆ. ವಿದ್ಯಾರ್ಥಿವೇತನದ ನೆರವಿಗಾಗಿ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಭೂಮಿಕಾ ಅವರು ತಮ್ಮ M.B.B.S. ವಿದ್ಯಾಭ್ಯಾಸಕ್ಕೂ ಸುಜ್ಞಾನನಿಧಿ ವಿದ್ಯಾರ್ಥಿವೇತನ ನೆರವಾಗಿದ್ದು, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ M.B.B.S. ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.

 

ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಅಡಚಣೆಗಳು ಉನ್ನತ ಶಿಕ್ಷಣದ ಹಾದಿಯಲ್ಲಿ ತಡೆಯಾಗಬಾರದು ಎಂಬ ಆಶಯದೊಂದಿಗೆ ನಡೆಯುತ್ತಿರುವ ಸುಜ್ಞಾನನಿಧಿ ಕಾರ್ಯಕ್ರಮವು ಹಲವು ಕುಟುಂಬಗಳಿಗೆ ಶೈಕ್ಷಣಿಕ ಬೆಂಬಲದ ವ್ಯವಸ್ಥೆಯಾಗಿ ರೂಪುಗೊಂಡಿದೆ. ಶಿಕ್ಷಣದ ಮೂಲಕ ಗ್ರಾಮೀಣ ಯುವಜನರ ಸಾಮರ್ಥ್ಯವನ್ನು ಬೆಳೆಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಮುಂದುವರಿದಿದೆ.

error: Content is protected !!