
ಬೆಳ್ತಂಗಡಿ: ವಿಪತ್ತಿನ ಸಂದರ್ಭದಲ್ಲಿ ಜೀವ ರಕ್ಷಿಸುವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಈಜು ಹಾಗೂ ಆಳ ನೀರಿನ ಸುರಕ್ಷತಾ ತರಬೇತಿ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.
ಶೌರ್ಯ ಸ್ವಯಂಸೇವಕರಿಗಾಗಿ ಆಯೋಜಿಸಲಾದ ಎರಡು ದಿನಗಳ ಈಜು ಮತ್ತು ಆಳ ನೀರಿನ ಸುರಕ್ಷತಾ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಕೇವಲ ಈಜು ಕಲಿಯುವುದಷ್ಟೇ ಅಲ್ಲದೆ, ಅಪಾಯದ ಸಂದರ್ಭದಲ್ಲಿ ಧೈರ್ಯ, ಸಮಯಪ್ರಜ್ಞೆ, ಶಿಸ್ತು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಕಾರ್ಯನಿರ್ವಹಿಸುವ ಕೌಶಲ್ಯವನ್ನು ಈ ತರಬೇತಿ ನೀಡುತ್ತದೆ. ಸ್ವಯಂಸೇವಕರಿಗೆ ನೀಡಲಾಗುವ ನಿರಂತರ ತರಬೇತಿ ಮತ್ತು ಸಿದ್ಧತೆ ಸಮಾಜಕ್ಕೆ ಒಂದು ದೊಡ್ಡ ಭದ್ರತೆಯಾಗಿದೆ. ಶೌರ್ಯ ಸ್ವಯಂಸೇವಕರ ಸೇವಾ ಮನೋಭಾವ ಇನ್ನಷ್ಟು ಬಲಗೊಳ್ಳಲಿ ಹಾಗೂ ಅವರ ತರಬೇತಿ ಸಮಾಜದ ಅನೇಕ ಜೀವಗಳಿಗೆ ರಕ್ಷಣೆಯಾಗಲಿ” ಎಂದು ಅವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಡಾ. ವಿಶ್ವನಾಥ್ ಪಿ. ಮಾತನಾಡಿ, ಪೂಜ್ಯರ ಆಶಯದಂತೆ ಶೌರ್ಯ ಸ್ವಯಂಸೇವಕರು ತರಬೇತಿ, ಶಿಸ್ತು, ಧೈರ್ಯ ಹಾಗೂ ಸಮಯೋಚಿತ ಸ್ಪಂದನೆಯ ಮೂಲಕ ಸಮಾಜಕ್ಕೆ ನೀಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದರು. ಅಪಾಯದ ಸಂದರ್ಭಗಳಲ್ಲಿ ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಇತರರ ನೆರವಿಗೆ ಧಾವಿಸುವ ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವಯಂಸೇವಕರಿಗೆ ಆಳ ನೀರಿನ ಸುರಕ್ಷತಾ ಪರಿಕರಗಳನ್ನು ವಿತರಿಸಲಾಯಿತು.
ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀ ವಿವೇಕ್ ವಿ. ಪಾಯಸ್ ಅವರು ಶೌರ್ಯ ಸ್ವಯಂಸೇವಕರಿಗೆ ತರಬೇತಿ ಕಾರ್ಯಕ್ರಮದ ಹಿನ್ನೆಲೆ ಹಾಗೂ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) 10ನೇ ಬೆಟಾಲಿಯನ್, ವಿಜಯವಾಡದ ಇನ್‌ಸ್ಪೆಕ್ಟರ್ ಶ್ರೀ ಶಾಂತಿಲಾಲ್ ಜಟಿಯಾರ್ ಅವರ ನೇತೃತ್ವದ NDRF ತಂಡದಿಂದ ತರಬೇತಿ ಕಾರ್ಯಕ್ರಮ ನಡೆಯಿತು.
ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದಡಿ ಆಯ್ಕೆಯಾದ 45 ಶೌರ್ಯ ಸ್ವಯಂಸೇವಕರಿಗೆ ಎರಡು ದಿನಗಳ ಈಜು ಹಾಗೂ ಆಳ ನೀರಿನ ಸುರಕ್ಷತಾ ತರಬೇತಿಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಈಜುಕೊಳದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀ ಜೈವಂತ್ ಪಟಗಾರ ಸ್ವಾಗತಿಸಿದರು. ಶ್ರೀ ಕಿಶೋರ್ ನಿರೂಪಿಸಿದರು. ಶ್ರೀ ಯಶೋಧರ ಕೆ. ವಂದಿಸಿದರು.