
ಬೆಳ್ತಂಗಡಿ: ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ರಾಡ್ ಸಹಿತ ಸಿಮೆಂಟ್ ತುಂಡು ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಸೆ. 17ರಂದು ಸಂಜೆ ಸುಮಾರು 4.30ಕ್ಕೆ ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿ ನಡೆದಿದೆ.
ಮೃತರನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ನಿವಾಸಿ ಆಲಿ ಅವರ ಪುತ್ರ ಝುಬೈರ್ (22) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಮಳಿಗೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಮೇಲ್ಭಾಗದಲ್ಲಿ ರಾಡ್ ಸಹಿತ ಸಿಮೆಂಟ್ ಭಾಗವನ್ನು ತೆರವುಗೊಳಿಸುವ ಒಂದು ಭಾಗದ ಸಿಮೆಂಟ್ ತುಂಡೊಂದು ಕ, ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಝುಬೈರ್ ಅವರ ಮೇಲೆ ಬಿದ್ದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಝುಬೈರ್ ಅವರನ್ನು ತಕ್ಷಣ ಸ್ಥಳೀಯರ ಸಹಕಾರದಿಂದ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.