
ಬೆಳ್ತಂಗಡಿ, ಸೆ. 16: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (ESA)ಕ್ಕೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಕರಡು ಪ್ರತಿಯ ಕುರಿತು ಗ್ರಾಮ ಮಟ್ಟದಲ್ಲಿಯೇ ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆ ಹಾಗೂ ಸಲಹೆಗಳನ್ನು ದಾಖಲಿಸಬೇಕು ಎಂದು ಶಾಸಕ ಹರೀಶ್ ಪೂಂಜ ಅವರು ಸೆಪ್ಟೆಂಬರ್ 15ರಂದು ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದರು.
ಶಾಸಕರ ಸಲಹೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ತಾಲೂಕು ಪಂಚಾಯತ್ ಮೂಲಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದ್ದು, ವಿಶೇಷ ಗ್ರಾಮಸಭೆ ನಡೆಸಿ ಅದರ ಮಾಹಿತಿಯನ್ನು ಪಂಚತಂತ್ರ 2.0ರಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.
ಅಲ್ಲದೆ, ಗ್ರಾಮಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಕರಡು ಪ್ರತಿಯ ಕುರಿತು ಚರ್ಚೆ ನಡೆಸಿ, ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಗ್ರಾಮಸಭೆಯ ನಡಾವಳಿಯಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ.
ಈ ಕ್ರಮದ ಮೂಲಕ ಪಶ್ಚಿಮ ಘಟ್ಟ ಪ್ರದೇಶದ ರೈತರು, ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ತಮ್ಮ ಪ್ರದೇಶದ ವಾಸ್ತವಾಂಶಗಳು, ಸಮಸ್ಯೆಗಳು ಮತ್ತು ಅಭಿಪ್ರಾಯಗಳನ್ನು ಅಧಿಕೃತವಾಗಿ ದಾಖಲಿಸಿ ಸರ್ಕಾರದ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಕೆಡಿಪಿ ಸಭೆಯಲ್ಲಿ ಶಾಸಕರು ಮುಂದಿಟ್ಟ ಸಲಹೆಗೆ ತಕ್ಷಣವೇ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿರುವುದು, ಸ್ಥಳೀಯ ಜನರ ಅಭಿಪ್ರಾಯಗಳಿಗೆ ಅಧಿಕೃತ ದಾಖಲೆ ರೂಪ ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ.
ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ವಿಶೇಷ ಗ್ರಾಮಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಸ್ತೂರಿರಂಗನ್ ವರದಿಯ ಕರಡು ಹಾಗೂ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ತಮ್ಮ ಪ್ರದೇಶದ ವಾಸ್ತವಾಂಶಗಳು, ಸಮಸ್ಯೆಗಳು, ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಂಪೂರ್ಣವಾಗಿ ನಡಾವಳಿಯಲ್ಲಿ ದಾಖಲಿಸುವಂತೆ ಶಾಸಕ ಹರೀಶ್ ಪೂಂಜ ಅವರು ಮನವಿ ಮಾಡಿದ್ದಾರೆ.