ಭೂ ದಾಖಲೆ ತಿದ್ದುಪಡಿಗೆ ₹ 1 ಕೋಟಿ ಲಂಚದ ಬೇಡಿಕೆ,: ₹ 50 ಲಕ್ಷ ಮುಂಗಡ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್:

 

 

ಧಾರವಾಡ: ಭೂಮಿಯ ದಾಖಲೆ ಸರಿಪಡಿಸಿ ಅಭಿವೃದ್ಧಿಗೆ ಅನುಮತಿ ನೀಡಲು ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹50 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಬಾಗಲಕೋಟೆ ಮೂಲದ ಬಿಲ್ಡರ್ ಮಂಜುನಾಥ್ ಅವರು ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ 33 ಎಕರೆ ಜಮೀನು ಖರೀದಿಸಿದ್ದರು. ಜಮೀನಿನಲ್ಲಿದ್ದ ‘ಅ ಖರಾಬ್’ ಮತ್ತು ಸಾಗುವಳಿ ಭೂಮಿಗೆ ಸಂಬಂಧಿಸಿದಂತೆ ದಾಖಲೆಗಳ ಪ್ರಕ್ರಿಯೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ‘ಅ ಖರಾಬ್’ ತೆರವುಗೊಳಿಸಿ ಜಮೀನನ್ನು ಅಭಿವೃದ್ಧಿಪಡಿಸಲು ಅನುಕೂಲ ಮಾಡಿಕೊಡುವುದಕ್ಕಾಗಿ ತಹಶೀಲ್ದಾರ್ ₹1 ಕೋಟಿ ಹಣದ ಜೊತೆಗೆ ಒಂದು ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ತಹಶೀಲ್ದಾರ್‌ರನ್ನು ಬಲೆಗೆ ಬೀಳಿಸಲು ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ಕೆಸಿಡಿ ಸಮೀಪ ದೂರುದಾರರಿಂದ ₹50 ಲಕ್ಷ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ದೂರುದಾರರು ತಂದಿದ್ದ ಹಣವನ್ನು ತಹಶೀಲ್ದಾರ್ ತಮ್ಮ ಬ್ಯಾಗ್‌ಗೆ ಹಾಕಿಕೊಂಡ ಬಳಿಕ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ತಿಳಿಸಿದ್ದಾರೆ.

ಎಡಿಎಲ್‌ಆರ್ ಅವರು ಈ ಹಿಂದೆ ಮಾಡಿದ್ದ ಪೋಡಿ ಆದೇಶವನ್ನು ರದ್ದುಪಡಿಸಿದ್ದರು. ಬಳಿಕ ‘ಅ ಖರಾಬ್’ ಮತ್ತು ಸಾಗುವಳಿ ಭೂಮಿ ಯಾವ ಭಾಗದಲ್ಲಿ ಬರುತ್ತದೆ ಎಂಬುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ತಹಶೀಲ್ದಾರ್‌ಗೆ ಕಳುಹಿಸಲಾಗಿತ್ತು. ಇದೇ ವಿಚಾರದಲ್ಲಿ ಲಂಚದ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!