
ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಬೆಳ್ತಂಗಡಿ ಮೂಲದ ಯುವ ವಕೀಲ ಜಿತಿನ್ ಜಿಜೊ (26) ವಿರುದ್ಧ ಬೆಂಗಳೂರಿನ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ರಲ್ಲಿ ಕಾನೂನು ಪ್ರಕರಣವೊಂದರ ವಿಚಾರವಾಗಿ ಪರಿಚಯವಾಗಿದ್ದ ಜಿತಿನ್, ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಮಹಿಳೆಗೆ ವಿಚ್ಛೇದನ ದೊರೆತ ನಂತರ ಆರೋಪಿ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿಂದಿಸುತ್ತಿದ್ದನೆಂದು ದೂರಲಾಗಿದೆ.
ಸೆ.2ರಂದು ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ಮೊಬೈಲ್‌ನಲ್ಲಿದ್ದ ವೈಯಕ್ತಿಕ ಸಂದೇಶಗಳನ್ನು ಅಳಿಸಿ, ಮಹಿಳೆಯ ಮೇಲೆ ಹಲ್ಲೆ ನಡೆಸಿ, ಫ್ಯಾನ್‌ನಿಂದ ಹೊಡೆದು ಹಾಗೂ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ BNSನ ವಿವಿಧ ಸೆಕ್ಷನ್‌ಗಳಡಿ ಸೆ.3ರಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.