
ಬೆಳ್ತಂಗಡಿ : ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಸುವ ಕೇಂದ್ರವಾಗದೇ ವಿದ್ಯಾರ್ಥಿಗಳಿಗೆ ಉತ್ತಮ ನಡತೆಯನ್ನು ಕಲಿಸುವ ಪ್ರಮುಖ ಸಂಸ್ಥೆಯಾಗಬೇಕು ಎಂದು ಉದ್ಯಮಿ ಬಂಟರ ಸಂಘದ ಮಾರ್ಗದರ್ಶಕ ಶಶಿಧರ್ ಶೆಟ್ಟಿ ಬರೋಡ ಹೇಳಿದರು.ಅವರು
ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಶ್ರೀಮತಿ ಕಾಶಿ ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಬೆಂಗಳೂರು ಬಂಟರ ಸಂಘ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಕಳ ಅಜೆಕಾರಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಜತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ಮಾಡುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಜ್ಞಾನಸುಧಾ ಸಂಸ್ಥೆ ಮಾದರಿಯಾಗಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ವಿದ್ಯಾರ್ಥಿಗಳಿಗೆ ಸೌಭಾಗ್ಯ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಜ್ಞಾನಸುಧಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರ ಶೈಕ್ಷಣಿಕ ಸೇವೆ ಅಭಿನಂದನೀಯ ಎಂದರು.
ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿ ತಮ್ಮ ತಂದೆ-ತಾಯಿಗೆ ಆದರ್ಶಪ್ರಾಯರಾಗಬೇಕು. ವಿದ್ಯೆಯ ಜತೆಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ತಂದೆ-ತಾಯಿಯನ್ನು ದೇವರ ಸ್ಥಾನದಲ್ಲಿಟ್ಟು ಗೌರವಿಸಬೇಕು.ಡಾ. ಸುಧಾಕರ ಶೆಟ್ಟಿ:
ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ವಿನಯವಿಲ್ಲದ ವಿದ್ಯೆಗೆ ಮೌಲ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ದಾರಿ ತಪ್ಪದೆ ಉತ್ತಮವಾಗಿ ಅಭ್ಯಾಸ ನಡೆಸಿ, ಉದ್ಯೋಗ ಪಡೆದು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ನಿಂತು ಪೋಷಕರಿಗೆ ಆಶಾಕಿರಣವಾಗಬೇಕು ಎಂದು ಹೇಳಿದರು.

ತಂದೆ-ತಾಯಿಯ ತ್ಯಾಗ ಹಾಗೂ ಕಷ್ಟಗಳನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಅವರ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವುದರಿಂದ ಮಾತ್ರ ಕರ್ತವ್ಯ ಮುಗಿಯುವುದಿಲ್ಲ. ಬದಲಾಗಿ, ಅವರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಮತ್ತು ಅವರಿಗೆ ನೆಮ್ಮದಿಯ ಜೀವನ ನೀಡುವುದು ಮಕ್ಕಳ ನಿಜವಾದ ಕರ್ತವ್ಯ ಎಂದರು.
ಸಮಾಜದ ಎಲ್ಲ ಜಾತಿ, ವರ್ಗಗಳು ನಮ್ಮ ದೇಹದ ವಿವಿಧ ಅಂಗಗಳಿದ್ದಂತೆ. ಪರಸ್ಪರ ಸಾಮರಸ್ಯದಿಂದ ಬದುಕುವುದರ ಮೂಲಕ ಸಮಾಜವನ್ನು ಸದೃಢಗೊಳಿಸಬೇಕು. ವಿದ್ಯಾರ್ಥಿಗಳು ಡ್ರಗ್ಸ್ ಸೇರಿದಂತೆ ದುಶ್ಚಟಗಳಿಗೆ ಹಾಗೂ ಕ್ಷಣಿಕ ಪ್ರೀತಿ-ವ್ಯಾಮೋಹಕ್ಕೆ ಬಲಿಯಾಗಬಾರದು. ಇಂತಹ ಬೆಳವಣಿಗೆಗಳಿಂದ ವಿದ್ಯಾರ್ಥಿಗಳ ಭವಿಷ್ಯ ಮಾತ್ರವಲ್ಲದೆ ಪೋಷಕರೂ ಮಾನಸಿಕವಾಗಿ ನೋವು ಅನುಭವಿಸುವಂತಾಗುತ್ತದೆ. ಪೋಷಕರನ್ನು ನೋಯಿಸದೆ, ಅವರ ನಿರೀಕ್ಷೆಗಳಿಗೆ ತಕ್ಕಂತೆ ಯಶಸ್ಸು ಸಾಧಿಸುವ ಮಕ್ಕಳು ಜೀವನದಲ್ಲಿ ಉತ್ತಮ ಸ್ಥಾನ ಪಡೆಯುತ್ತಾರೆ ಎಂದರು.
ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಬಾರಿ 225 ಎಂಬಿಬಿಎಸ್ ಸೀಟುಗಳು ಲಭಿಸಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಇತರ ಸಮಾಜದ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಧನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪಿ.ಎಚ್. ಪ್ರಕಾಶ್ ಶೆಟ್ಟಿ ನೊಚ್ಚ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಘವು ನಿರಂತರವಾಗಿ ಬೆಂಬಲ ನೀಡುತ್ತಿದೆ.ಶಶಿಯಣ್ಣನ ಭರವಸೆಯಿಂದಾಗಿ ಬೆಳ್ತಂಗಡಿ ಬಂಟರ ಸಂಘದ ಅಭಿವೃದ್ಧಿಯಾಗಿದೆ. ಅವರ ಆಶಯದಂತೆ ಮುಂದಿನ ವರ್ಷದಿಂದ ಬಂಟರ ಸಮಾಜದ ವಿದ್ಯಾರ್ಥಿಗಳ ಜತೆಗೆ ಇತರ ಸಮಾಜದ ವಿದ್ಯಾರ್ಥಿಗಳಿಗೂ ಶೇ. 10ರಷ್ಟು ಪ್ರೋತ್ಸಾಹಧನ ನೀಡಿ ಪ್ರೋತ್ಸಾಹಿಸಲಾಗುವುದು.

ಶಿಕ್ಷಣದ ಮೂಲಕ ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಸಂಘದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
46 ವರ್ಷಗಳಿಂದ ವಿದ್ಯಾರ್ಥಿನಿಧಿಯ ಸೇವೆ
ವಿದ್ಯಾರ್ಥಿನಿಧಿ ಸಂಚಾಲಕ ಅಜಿತ್ ಜಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 46 ವರ್ಷಗಳಿಂದ ದಾನಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಬಾರಿ ಒಟ್ಟು 326 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಮಾಜದೊಂದಿಗೆ ಹಾಗೂ ತಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದರ ಜತೆಗೆ ಅವರ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುವುದು ವಿದ್ಯಾರ್ಥಿನಿಧಿಯ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿನಿಧಿಯಿಂದ ನೆರವು ಪಡೆದು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿದ ಬಳಿಕ ಅನೇಕ ವಿದ್ಯಾರ್ಥಿಗಳು ಮರಳಿ ವಿದ್ಯಾರ್ಥಿನಿಧಿಗೆ ಸಹಕಾರ ನೀಡುತ್ತಿರುವುದು ಗಮನಾರ್ಹ ಮತ್ತು ಸಂತಸದ ಸಂಗತಿಯಾಗಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಕಳ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ , ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ನಿಕಟಪೂರ್ವ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿ ಗುಡ್ಡೆ,
ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಪಾಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು,,ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ,ಯುವ ವಿಭಾಗದ ಅಧ್ಯಕ್ಷ ಅಜಯ್ ಜೆ. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಸುಧ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಶ್ರೇಯಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಧನ್ಯವಾದವಿತ್ತರು.