ಉಜಿರೆ ಪೇಟೆ ಬಳಿ ಕಾಡಾನೆ ಹಾವಳಿ ಕಾಡಿಗಟ್ಟಲು ಅರಣ್ಯ ಸಿಬ್ಬಂದಿಯ ಹರಸಾಹಸ; ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ

 

 

 

 

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಆವರಣಕ್ಕೆ ಬೆಳಿಗ್ಗೆ ನುಗ್ಗಿದ ಕಾಡಾನೆ, ದಿನವಿಡೀ ಅಲ್ಲೇ ಸುತ್ತಾಡುತ್ತಿದ್ದು, ಸಂಜೆಯ ವೇಳೆಗೆ ಉಜಿರೆ ಪೇಟೆಯತ್ತ ಸಾಗಲು ಯತ್ನಿಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಕಾಡಾನೆ ಕಾಲೇಜು ಆವರಣದೊಳಗೆ ಪ್ರವೇಶಿಸಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಅರಣ್ಯ ಕಾರ್ಯಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಆನೆಯ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ಆನೆಯನ್ನು ಜನವಸತಿ ಪ್ರದೇಶದತ್ತ ತೆರಳದಂತೆ ತಡೆಯಲು ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಂಜೆಯಾಗುತ್ತಿದ್ದಂತೆ ಕಾಡಾನೆ ಉಜಿರೆ ಪೇಟೆಯತ್ತ ಸಾಗಲು ಯತ್ನಿಸಿದ್ದು, ಈ ವೇಳೆ ಅರಣ್ಯ ಕಾರ್ಯಪಡೆಯ ಸಿಬ್ಬಂದಿ ಸಿಡಿಮದ್ದು ಸಿಡಿಸಿ ಆನೆಯನ್ನು ಪೇಟೆಯತ್ತ ತೆರಳದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಆನೆ ಇನ್ನೂ ಕಾಡಿನತ್ತ ತೆರಳದೆ ಕಾಲೇಜು ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲೇ ಓಡಾಡುತ್ತಿರುವುದರಿಂದ ಕಾರ್ಯಾಚರಣೆಗೆ ಸವಾಲು ಎದುರಾಗಿದೆ.

ಈಗಾಗಲೇ ಕತ್ತಲಾಗಿದ್ದು, ಆನೆಯನ್ನು ಕಾಡಿನತ್ತ ಸುರಕ್ಷಿತವಾಗಿ ಓಡಿಸುವುದು ಅರಣ್ಯ ಸಿಬ್ಬಂದಿಗೆ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ. ಯಾವುದೇ ರೀತಿಯಲ್ಲಿ ಆನೆ ಜನವಸತಿ ಪ್ರದೇಶಕ್ಕೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಈ ನಡುವೆ ಅರಣ್ಯ ಇಲಾಖೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದೆ. ಆನೆ ಸಂಚರಿಸುತ್ತಿರುವ ಪ್ರದೇಶದತ್ತ ತೆರಳದಂತೆ, ಗುಂಪು ಸೇರಿ ಆನೆಯನ್ನು ಹಿಂಬಾಲಿಸದಂತೆ ಹಾಗೂ ಅಗತ್ಯವಿಲ್ಲದೆ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಉಜಿರೆ ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಚಲನವಲನವನ್ನು ಗಮನಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಆನೆಯನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆ ಮುಂದುವರಿದಿದೆ.

error: Content is protected !!