
ಧರ್ಮಸ್ಥಳ: ವ್ಯಸನಮುಕ್ತ ಜೀವನದ ಮೂಲಕ ಸುಂದರ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು ಎಂದು ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 277ನೇ ವಿಶೇಷ ಮದ್ಯವರ್ಜನ ಶಿಬಿರದ 58 ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಅವರು ಮಾತನಾಡಿದರು.
ವ್ಯಸನಗಳ ಸುಳಿಯಿಂದ ಹೊರಬಂದು ಪರಿಪೂರ್ಣ ಬದುಕನ್ನು ರೂಪಿಸಿಕೊಳ್ಳಲು ಹಂಬಲಿಸುವ ಮನಸ್ಸುಗಳಿಗೆ ಧರ್ಮಸ್ಥಳದ ಮದ್ಯವರ್ಜನ ಶಿಬಿರ ಸದಾ ಆಸರೆಯಾಗಿದೆ. ಮದ್ಯಪಾನವು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಗಂಭೀರ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು.
ಮದ್ಯವರ್ಜನ ಶಿಬಿರಗಳಲ್ಲಿ ಶಿಬಿರಾರ್ಥಿಗಳಲ್ಲಿ ಹೊಸ ದಿನಚರಿ, ಯೋಗ, ಧ್ಯಾನ ಹಾಗೂ ಧನಾತ್ಮಕ ಚಿಂತನೆಗಳ ಮೂಲಕ ಮಾನಸಿಕ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮದ್ಯಪಾನದಂತಹ ಮಾರಕ ವ್ಯಸನದಿಂದ ಹೊರಬಂದು ಹೊಸ ಜೀವನವನ್ನು ಆರಂಭಿಸಲು ದೃಢ ಸಂಕಲ್ಪವೇ ಮುಖ್ಯ ಅಸ್ತ್ರವಾಗಿದೆ. ಜೀವನದಲ್ಲಿ ಆರೋಗ್ಯವೇ ನಿಜವಾದ ಭಾಗ್ಯ. ದುಶ್ಚಟಗಳಿಂದ ದೂರವಾಗಿ ಮಾನಸಿಕ ಪರಿವರ್ತನೆ ಹೊಂದುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದೇವಿಪ್ರಸಾದ್, ಜಯಾನಂದ, ಆರೋಗ್ಯ ಸಹಾಯಕರಾದ ಶ್ರೀಮತಿ ಪ್ರೆಸಿಲ್ಲಾ ಡಿಸೋಜ, ಆಪ್ತ ಸಮಾಲೋಚಕರಾದ ಶ್ರೀ ಜಿ.ಆರ್. ಮಧುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.