ಬರಾಯಕೆರೆ ಗಣಿಗಾರಿಕೆ: ಸ್ಥಳಕ್ಕೆ ಡಿವೈಎಸ್ಪಿ ಭೇಟಿ, ಅಧಿಕಾರಿಗಳಿಂದ ಪರಿಶೀಲನೆ

 

 

ಬೆಳ್ತಂಗಡಿ: ಅಳದಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಪ್ರದೇಶದಲ್ಲಿ ನಡೆಯುತ್ತಿರುವ ಕಪ್ಪುಕಲ್ಲು ಗಣಿಗಾರಿಕೆ ವಿರುದ್ಧ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ ಅಧಿಕಾರಿಗಳ ಭೇಟಿ ಹಾಗೂ ಪರಿಶೀಲನೆ ಚುರುಕುಗೊಂಡಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಬರಾಯಕೆರೆ ಸಂರಕ್ಷಣಾ ಸಮಿತಿ ಮನವಿ ಸಲ್ಲಿಸಿದ ಬಳಿಕ ಅಧಿಕಾರಿಗಳ ತಂಡಗಳು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡುತ್ತಿವೆ. ಶನಿವಾರ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯರ ಆರೋಪದ ಪ್ರಕಾರ, ಭೂಮಾಲೀಕರೊಬ್ಬರು ಕೃಷಿ ಚಟುವಟಿಕೆಯ ನೆಪದಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಕಪ್ಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆ ವೇಳೆ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಫೋಟದ ಪರಿಣಾಮ ಹಾಗೂ ಗಣಿಗಾರಿಕೆಯಿಂದ ಸುತ್ತಮುತ್ತಲಿನ ಮನೆಗಳಿಗೆ ಬಿರುಕು ಬಿದ್ದಿವೆ. ಕಲ್ಲು ಮತ್ತು ಕಲ್ಲಿನ ಪುಡಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದು, ಬೃಹತ್ ಗಾತ್ರದ ಲಾರಿಗಳ ನಿರಂತರ ಸಂಚಾರದಿಂದ ಗ್ರಾಮ ಪಂಚಾಯಿತಿ ರಸ್ತೆಗಳು ಹಾಗೂ ಮೋರಿಗಳು ಹಾನಿಗೊಳಗಾಗಿವೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಐತಿಹಾಸಿಕ ಬರಾಯಕೆರೆ ಗಣಿಗಾರಿಕೆಯ ಪರಿಣಾಮವಾಗಿ ಕಲುಷಿತಗೊಂಡಿದೆ ಎಂದು ಸಂರಕ್ಷಣಾ ಸಮಿತಿ ಆರೋಪಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲೂ ಪರಿಸರ, ಕೃಷಿ, ರಸ್ತೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ.

ಗಣಿಗಾರಿಕೆ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಸ್ಫೋಟಕ ಬಳಕೆ ನಡೆಯುತ್ತಿದ್ದರೆ ಅದು ಗಂಭೀರ ವಿಚಾರವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಸ್ಥಳ ಪರಿಶೀಲನೆಯ ಬಳಿಕ ಅಧಿಕಾರಿಗಳಿಂದ ಮುಂದಿನ ಕ್ರಮದ ನಿರೀಕ್ಷೆ ಸ್ಥಳೀಯರಲ್ಲಿ ಮೂಡಿದೆ.

ಈ ಸಂದರ್ಭದಲ್ಲಿ ಬರಾಯಕೆರೆ ಸಂರಕ್ಷಣಾ ಸಮಿತಿ ಮುಖಂಡರಾದ ಲಿಯೋ ಪಿರೇರಾ, ಹರೀಶ್ ಪೂಜಾರಿ, ಪ್ರವೀಣ್ ನಿನ್ನಿಕಲ್ಲು, ಜೋನ್ ಡಿಸೋಜ, ಸುಬ್ರಹ್ಮಣ್ಯ ಮಡಿವಾಳ, ವಿಶ್ವನಾಥ ಪಿಲ್ಯ, ಜೋಕಿಂ ಡಿಸೋಜ, ಕೂಸ ಅಳದಂಗಡಿ, ವಿಲ್ಮಾ ಡಿಸೋಜ, ರೀಟಾ ಡಿಸೋಜ, ಗೀತಾ, ವನಿತಾ ಹರೀಶ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಗಣಿಗಾರಿಕೆ, ಸ್ಫೋಟಕ ಬಳಕೆ, ಪರಿಸರ ಹಾನಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಬರಾಯಕೆರೆ ಸಂರಕ್ಷಣಾ ಸಮಿತಿಯ ಪ್ರಮುಖ ಒತ್ತಾಯವಾಗಿದೆ.

error: Content is protected !!