
ಬೆಳ್ತಂಗಡಿ: ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಮಾಲಕರೊಬ್ಬರು ಮನೆಯ ಪಕ್ಕದ ಮಣ್ಣನ್ನು ತೆರವುಗೊಳಿಸಿರುವುದರಿಂದ ಮನೆ ಕುಸಿಯುವ ಭೀತಿ ಎದುರಾಗಿದ್ದು, ಜೀವಭಯದಿಂದ ವಾಸಿಸುತ್ತಿದ್ದೇವೆ. ಈ ಕುರಿತು ತಹಶೀಲ್ದಾರ್ ಹಾಗೂ ಲಾಯಿಲ ಗ್ರಾಮ ಪಂಚಾಯತ್ ,ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ನ್ಯಾಯ ಒದಗಿಸಬೇಕು ಎಂದು ಮಹಿಳೆಯೊಬ್ಬರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ ಘಟನೆ ಗುರುವಾರ ನಡೆದಿದೆ.
ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ತಾಲೂಕು ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ಮಮತಾ ಅವರು ದೂರು ಸಲ್ಲಿಸಿದರು. ಗಂಗಾಧರ ಗೌಡ ಎಂಬವರು ತಮ್ಮ ಮನೆಯ ಪಕ್ಕದ ಮಣ್ಣನ್ನು ತೆರವುಗೊಳಿಸಿರುವುದರಿಂದ ಮನೆ ಕುಸಿಯುವ ಅಪಾಯ ಎದುರಾಗಿದೆ. ಈ ಬಗ್ಗೆ ತಹಶೀಲ್ದಾರ್ ಸೇರಿದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ತಮ್ಮದು ಆಶ್ರಯ ಯೋಜನೆಯಡಿ ಮಂಜೂರಾದ ಮನೆಯಾಗಿದೆ. ಮನೆ ಕುಸಿಯುವ ಭೀತಿಯಿಂದ ಈಗಾಗಲೇ ಹಲವು ಮಂದಿ ಮನೆ ತೊರೆದು ಹೋಗಿದ್ದಾರೆ. ಹೀಗಾಗಿ ತಮಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮಮತಾ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದರು. ಅಲ್ಲದೆ, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರಿಗೆ ನಿರ್ದೇಶನ ನೀಡಿದರು.