ಮಾಳವ–ಮಲ್ಲವರ ಸಮಾಜದ ವತಿಯಿಂದ ಪ್ರಥಮ ವರ್ಷದ “ಕೆಸರಿನಲ್ಲಿ ಒಂದು ದಿನ” ಕಾರ್ಯಕ್ರಮ

 

 

 

ಬೆಳ್ತಂಗಡಿ: ಮಾಳವ ಯಾನೆ ಮಲ್ಲವರ ಸಮಾಜಾಭ್ಯುದಯ ಸಂಘ (ರಿ.), ಬೆಳ್ತಂಗಡಿ ಇದರ ಸಹಕಾರದೊಂದಿಗೆ ಮಾಳವ ಯಾನೆ ಮಲ್ಲವರ ಯುವಕ ಸಂಘ ಹಾಗೂ ಮಹಿಳಾ ಸಂಘ, ಬೆಳ್ತಂಗಡಿ ಇವರ ವತಿಯಿಂದ ಆಯೋಜಿಸಲಾದ ಪ್ರಥಮ ವರ್ಷದ “ಕೆಸರಿನಲ್ಲಿ ಒಂದು ದಿನ” ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯ ಅಲ್ಲಾಟಬೈಲು ಎಂಬಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ  ಲಿಂಗಪ್ಪ ಹೆಗ್ಡೆ ಅವರು ಉದ್ಘಾಟಿಸಿದರು. ಬಳಿಕ ಗದ್ದೆಗೆ ಹಾಲು ಒಯ್ಯುವ ಸಾಂಪ್ರದಾಯಿಕ ಕಾರ್ಯಕ್ರಮದ ಮೂಲಕ ವಿವಿಧ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಸಮಾಜ ಬಾಂಧವರು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜ ಬಾಂಧವರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆ ಚಾ-ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೆ, ಸಮಾಜದ ಸದಸ್ಯರು ತಮ್ಮ ಕೈಯಾರೆ ತಯಾರಿಸಿದ ವಿವಿಧ ಬಗೆಯ ಖಾದ್ಯಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಮಾಳವ ಯಾನೆ ಮಲ್ಲವರ ಸಮಾಜಾಭ್ಯುದಯ ಸಂಘ (ರಿ.), ಬೆಳ್ತಂಗಡಿ  ಅಧ್ಯಕ್ಷ  ಶಿವಶಂಕರ್ ಬೆಳ್ತಂಗಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ  ಹರೀಶ್ ಪೂಂಜ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅತಿಥಿಗಳಾಗಿ  ಶರತ್ ಶೆಟ್ಟಿ, ನಿತ್ಯಾನಂದ ಮಾಲಾಡಿ, ಕುಶಾಲ ಮಾಧವ, ಮಾಳವ ಯಾನೆ ಮಲ್ಲವರ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ಬೆಳ್ತಂಗಡಿ ಹಾಗೂ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಸತೀಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಳವ ಯಾನೆ ಮಲ್ಲವರ ಯುವಕ ಸಂಘದ ವತಿಯಿಂದ ಶಾಸಕರನ್ನು  ಗೌರವಿಸಲಾಯಿತು. ಅಲ್ಲದೆ, ಅಲ್ಲಾಟಬೈಲು ಪ್ರದೇಶಕ್ಕೆ ಶಾಸಕರ ವಿಶೇಷ ಅನುದಾನದ ಮೂಲಕ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಊರಿನ ಸಮಸ್ತ ನಾಗರಿಕರ ಪರವಾಗಿ ಮಾನ್ಯ ಶಾಸಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಮಾಳವ ಯಾನೆ ಮಲ್ಲವರ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ಬೆಳ್ತಂಗಡಿ ಅವರು ನೆರವೇರಿಸಿದರು. ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ದಿನೇಶ್ ಅವರು ವಂದನಾರ್ಪಣೆ ಸಲ್ಲಿಸಿದರು. ಮಾಳವ ಯಾನೆ ಮಲ್ಲವರ ಸಮಾಜಾಭ್ಯುದಯ ಸಂಘ (ರಿ.), ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ರಾಜ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾಜದ ಬಾಂಧವರಲ್ಲಿ ಒಗ್ಗಟ್ಟು, ಸೌಹಾರ್ದತೆ ಹಾಗೂ ಪರಸ್ಪರ ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಯೋಜಿಸಲಾದ “ಕೆಸರಿನಲ್ಲಿ ಒಂದು ದಿನ” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

error: Content is protected !!