ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಪಂಜರ ಪ್ರಕರಣ: ಡಿಎನ್ಎ ಪರೀಕ್ಷೆಯಲ್ಲಿ ಮೂವರ ಗುರುತು ದೃಢ

 

 

 

 

ಬೆಳ್ತಂಗಡಿ:ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ್ದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂವರ ಗುರುತು ಡಿಎನ್ಎ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ತನಿಖೆಯ ಭಾಗವಾಗಿ ವಿಠಲ ಗೌಡ ತೋರಿಸಿದ ಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳು 2025ರ ಸೆಪ್ಟೆಂಬರ್ 17 ಹಾಗೂ 18ರಂದು ಶೋಧ ಕಾರ್ಯಾಚರಣೆ ನಡೆಸಿ ಒಟ್ಟು ಏಳು ಅಸ್ಥಿಪಂಜರಗಳನ್ನು ಪತ್ತೆಹಚ್ಚಿದ್ದರು. ಅವುಗಳನ್ನು ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿತ್ತು. ಶೋಧದ ವೇಳೆ ಕೆಲ ಗುರುತಿನ ಚೀಟಿಗಳು (ಐಡಿ ಕಾರ್ಡ್‌ಗಳು) ಕೂಡ ಪತ್ತೆಯಾಗಿದ್ದು, ಅವುಗಳ ಆಧಾರದಲ್ಲಿ ಸಂಬಂಧಿತ ಕುಟುಂಬಗಳನ್ನು ಪತ್ತೆ ಮಾಡಿ, ಅವರ ಡಿಎನ್ಎ ಮಾದರಿಗಳನ್ನು ಬೆಳ್ತಂಗಡಿ ನ್ಯಾಯಾಲಯದ ಮೂಲಕ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಎಫ್‌ಎಸ್‌ಎಲ್ ವರದಿಯಲ್ಲಿ ಮೂರು ಅಸ್ಥಿಪಂಜರಗಳು ಸಂಬಂಧಿತ ಕುಟುಂಬಗಳ ಡಿಎನ್ಎ ಮಾದರಿಗಳೊಂದಿಗೆ ತಾಳೆಯಾಗಿರುವುದು ದೃಢಪಟ್ಟಿದೆ.

ಡಿಎನ್ಎ ಮೂಲಕ ಗುರುತಿಸಲಾದವರು:

ಡಿಎನ್ಎ ಪರೀಕ್ಷೆಯಲ್ಲಿ ಗುರುತಿಸಲಾದವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿಯ ಕೃಷ್ಣಪ್ಪ (85) ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯು.ಬಿ. ಅಯ್ಯಪ್ಪ ಅವರು 2017ರ ಜೂನ್ 25ರಂದು ಚಿಕಿತ್ಸೆಗಾಗಿ ಮೈಸೂರಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದಿಶೇಷ ನಾರಾಯಣ ಅವರು ಬೆಂಗಳೂರಿನಲ್ಲಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಳಿಕ 2013ರ ಅಕ್ಟೋಬರ್ 2ರಂದು ಮನೆಗೆ ಬಂದು ಮೊಬೈಲ್ ಇಟ್ಟು ಮತ್ತೆ ಹೊರಟು ನಾಪತ್ತೆಯಾಗಿದ್ದರು. ಅವರು ಈ ಹಿಂದೆಯೂ ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಕಾರಣ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ.

ಕೃಷ್ಣಪ್ಪ ಅವರು 2024ರ ಅಕ್ಟೋಬರ್ 22ರಂದು ಮನೆಯಿಂದ ಹೊರಟು ಮರಳಿ ಬಾರದೆ ನಾಪತ್ತೆಯಾಗಿದ್ದು, ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕುಟುಂಬಗಳಿಗೆ ಅಸ್ಥಿಪಂಜರ ಹಸ್ತಾಂತರಕ್ಕೆ ಅವಕಾಶ

ಡಿಎನ್ಎ ಪರೀಕ್ಷೆಯಿಂದ ಗುರುತು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಬಂಧಿತ ಕುಟುಂಬಗಳು ಎಸ್‌ಐಟಿಗೆ ಮನವಿ ಸಲ್ಲಿಸಿದಲ್ಲಿ ಅಸ್ಥಿಪಂಜರಗಳನ್ನು ಕಾನೂನು ಪ್ರಕ್ರಿಯೆಯಂತೆ ಹಸ್ತಾಂತರಿಸಲು ಅವಕಾಶವಿದೆ. ಎಸ್‌ಐಟಿ ಅಧಿಕಾರಿಗಳು ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಡಿಎನ್ಎ ಪರೀಕ್ಷೆಯ ಮೂಲಕ ಮೂವರ ಗುರುತು ದೃಢಪಟ್ಟಿರುವ ವಿಚಾರವನ್ನು ಉಲ್ಲೇಖಿಸಿದ್ದಾರೆ

error: Content is protected !!