
ವಿಶೇಷ ವರದಿ
ಬೆಳ್ತಂಗಡಿ: ನಮ್ಮ ಸುತ್ತಲಿನ ಪ್ರಕೃತಿಯು ಹಲವಾರು ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಇಂತಹ ರಹಸ್ಯಗಳನ್ನು ಭೇಧಿಸಿ ಸತ್ಯಾಸತ್ಯತೆಗಳನ್ನು ಅರಿಯುವ ಅಧ್ಯಯನವೇ ವಿಜ್ಞಾನ. ಪ್ರಕೃತಿಯ ಅನಂತ ರಹಸ್ಯಗಳಲ್ಲಿ ಅತ್ಯಂತ ನಿಗೂಢವಾದದ್ದು ಮಾನವನ ಮೆದುಳು ಎಂಬುದು ಬಹುಪಾಲು ವಿಜ್ಞಾನಿಗಳ ಅಭಿಪ್ರಾಯ. ಪ್ರಕೃತಿಯ ಪ್ರಾಣಿ ಪ್ರಭೇದಗಳಲ್ಲಿ ಮಾನವನೂ ಒಂದಾದರು, ಆತನ ಬುದ್ದಿಮತ್ತೆ ಇತರ ಪ್ರಾಣಿಗಳಿಗಿಂತ ಆತನನ್ನು ಬೇರ್ಪಡಿಸುತ್ತದೆ. ಇದುವರೆಗೆ ಇತಿಹಾಸ ಕಂಡಿರುವ ಎಲ್ಲಾ ನಾಗರೀಕತೆಗಳಿಗೆ ಮಾನವನ ಬುದ್ದಿಮತ್ತೆಯೇ ಪ್ರಮುಖ ಕಾರಣ. ಆದರೆ, ಇಂದು ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ, ನಮ್ಮ ಮೆದುಳಿನ ಬಗೆಗೆ ನಾವು ಗಳಿಸಿಕೊಂಡಿರುವ ಜ್ಞಾನ ಬರೀ ಪ್ರಾಥಮಿಕ ಮಟ್ಟದ್ದು ಎಂದರೆ ತಪಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ನಮ್ಮ ಮೆದುಳಿನ ಸಂಕೀರ್ಣವಾದ ರಚನೆ.
ಮಾನವನ ಮೆದುಳು ಲಕ್ಷಾಂತರ (ಸರಿಸುಮಾರು 80 ಲಕ್ಷ) ಸಣ್ಣ-ಸಣ್ಣ ಕಣಗಳಾದ “ನರಕೋಶ” ಅಥವಾ “ನ್ಯೂರೋನ್”ಗಳನ್ನು ಹೊಂದಿದ್ದು, ಅವುಗಳು ಒಂದಕ್ಕೊಂದು ಸಂಕೀರ್ಣವಾಗಿ ಹೆಣೆಯಲ್ಪಟ್ಟಿರುತ್ತವೆ. ಮೆದುಳು ನಿಯಂತ್ರಿಸುವ ಎಲ್ಲಾ ಚಟುವಟಿಕೆಗಳು ನರಕೋಶಗಳ ಮೂಲಕವೇ ನಡೆಯುತ್ತವೆ. ವಿಜ್ಞಾನಿಗಳು ಈಗಾಗಲೇ ಈ ನರಕೋಶಗಳ ಬಗೆಗೆ ಹಲವಾರು ಅಧ್ಯಯನಗಳನ್ನು ನಡೆಸಿದ್ದು, ಇನ್ನೂ ಹಲವು ಕುತೂಹಲಕಾರಿ ಅಂಶಗಳನ್ನು ನಿರಂತರವಾಗಿ ಅರಸುತಿದ್ದಾರೆ. ಇವುಗಳಲ್ಲಿ ಬಹಳ ಪ್ರಮುಖವಾದದ್ದು “ಬುದ್ಧಿಮತ್ತೆ” ಅಥವಾ “ಇಂಟೆಲಿಜೆನ್ಸ್”, ಅಂದರೆ, ಆಲೋಚಿಸುವ ಶಕ್ತಿ. ಇದು ಜೀವಿಗಳಲ್ಲಿ ಮಾತ್ರ ಕಂಡುಬರುವ ಕ್ರಿಯಾಶೀಲ ಪ್ರಕ್ರಿಯೆ. ಜೀವಿಗಳು ತಮ್ಮ ಅನುಭವದ ಆಧಾರದ ಮೇಲೆ ತನ್ನ ಸುತ್ತಲಿನ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಅರಿವನ್ನು ನೈಸರ್ಗಿಕವಾಗಿ ಪಡೆದುಕೂಳ್ಳುತ್ತವೆ. ಉದಾಹರಣೆಗೆ ಒಂದು ಮಗು ತನ್ನ ಭಾಷೆಯನ್ನು ಕಲಿಯುವ ರೀತಿ. ನಮ್ಮ ಮನೆಯಲ್ಲಿ ಬೆಳೆಯುವ ಮಗು ನಾವು ದಿನನಿತ್ಯ ಮಾತನಾಡುವುದನ್ನು ನೋಡಿ-ಕೇಳಿ ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದೆ ಮಾತನಾಡುವುದನ್ನು ಕಲಿಯುತ್ತದೆ. ನಾವು ಮಾತನಾಡುವ ಪದಗಳನ್ನು ಮಗುವಿನ ಮೆದುಳು ಕೇಳಿಸಿಕೊಂಡು ಅದರ ಭಾವನೆಯನ್ನೂ, ಬಳಕೆಯನ್ನೂ ಅರ್ಥೈಸಿಕೊಂಡು, ಬೇರೊಂದು ಸನ್ನಿವೇಶದಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಸಾಮರ್ಥ್ಯವನ್ನು ಅರಗಿಸಿಕೊಳ್ಳುತ್ತದೆ. ಅದೇ ರೀತಿ ಮಗು ಬೇರೆ ಬೇರೆ ಆಕೃತಿಗಳನ್ನು ಗುರುತಿಸುವುದನ್ನು ಗಮನಿಸಿರುತ್ತೀರಿ. ಉದಾಹರಣೆಗೆ ಪುಸ್ತಕವೊಂದನ್ನು ಮಗುವಿನ ಕೈಯಲ್ಲಿ ಇರಿಸಿ, ಅದರ ಪರಿಚಯ ಮಾಡಿಸಿಕೊಟ್ಟರೆ, ಮತ್ತೊಮೆ ಪುಸ್ತಕವನ್ನು ಹೋಲುವ ಚಿತ್ರವನ್ನು ತೋರಿಸಿದ ತಕ್ಷಣ ಮಗು ಅದನ್ನು ಪುಸ್ತಕ ಎಂದು ಗುರುತಿಸಿ ಕೈತಟ್ಟಿ ಖುಷಿಪಡುತ್ತದೆ. ಅಂದರೆ ದಿನನಿತ್ಯ ನೋಡುವ ಆಕೃತಿಗಳನ್ನು ಪರಿಚಯಿಸಿಕೊಂಡು ಮಗುವಿನ ಮೆದುಳು ಅದೇ ರೀತಿ ಹೋಲುವ ವಸ್ತುಗಳನ್ನು ಗುರುತಿಸಲು ತಯಾರಾಗುತ್ತವೆ. ಈ ಪ್ರಕ್ರಿಯೆ ಯಾವುದೇ ನಿರ್ಜೀವಿಗಳಲ್ಲಿ ನೈಸರ್ಗಿಕವಾಗಿ ಕಂಡುಬರುವುದಿಲ್ಲ. ಇಂತಹ ಅರಿವನ್ನು ಯಂತ್ರಗಳಲ್ಲಿ, ಗಣಕ ಯಂತ್ರ ತಂತ್ರಾಶಗಳ ಮೂಲಕ, ಕೃತಕವಾಗಿ ನಿರ್ಮಿಸುವ ಪ್ರಯತ್ನವೇ “ಕೃತಕ ಬುದ್ದಿಮತ್ತೆ” ಅಥವಾ “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)”.
AI ನ ಪರಿಕಲ್ಪನೆ ತೀರಾ ಹೊಸದೇನಲ್ಲ. 1950 ರಲ್ಲಿ ಅಲೆನ್ ಟ್ಯೂರಿಂಗ್ ಎಂಬ ಗಣಕಯಂತ್ರ ವಿಜ್ಞಾನಿ, ಯಂತ್ರಗಳೂ ಆಲೋಚಿಸಬಲ್ಲವು ಎಂಬ ಸಾಧ್ಯತೆಯನ್ನು ಮೊಟ್ಟ ಮೊದಲಿಗೆ ಪರಿಚಯಿಸಿದ. ಇದನ್ನು ಇಂದು “ಯಂತ್ರಕಲಿಕೆ” ಅಥವಾ “ಮಷೀನ್ ಲರ್ನಿಂಗ್” ಎಂದು ಕರೆಯುತ್ತಾರೆ. ನಂತರ, 1956 ರಲ್ಲಿ, ಮಾನವನಂತೆ ಯೋಚಿಸಬಲ್ಲ ಯಂತ್ರವನ್ನು ಆವಿಷ್ಕರಿಸುವ ಉದ್ದೇಶದಿಂದ, ಅಮೆರಿಕಾದ ಹ್ಯಾನೋವರ್ ನಲ್ಲಿರುವ ಡಾರ್ಟ್ ಮೌತ್ ಕಾಲೇಜಿನಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಹೆಸರನ್ನು ಮೊಟ್ಟ ಮೊದಲಿಗೆ ಉಪಯೋಗಿಸಿ, ಅದನ್ನು ಹೊಸ ಸಂಶೋಧನಾ ಕ್ಷೇತ್ರ ವೆಂದು ಘೋಷಿಸಲಾಯಿತು. ಮುಂದೆ ಹೆಸರುವಾಸಿಯಾದ ಹಲವು AI ವಿಜ್ಞಾನಿಗಳನ್ನು ಈ ಸಭೆಯು ಹುಟ್ಟುಹಾಕಿತು. ಹಲವಾರು ಸರ್ಕಾರಿ ಮತ್ತು ಖಾಸಗೀ ವಲಯಗಳಿಂದ ಹೂಡಿಕೆಗಳು ಹರಿದುಬಂದಿತ್ತಾದರೂ, ಕೃತಕ ಬುದ್ಧಿಮತ್ತೆಯ ಪ್ರಗತಿ ಊಹಿಸಿದಷ್ಟು ವೇಗವಾಗಿರಲಿಲ್ಲ. ನಿಧಾನವಾಗಿ AI ಮೇಲೆನ ಕುತೂಹಲ ಕ್ಷೀಣಿಸುತಿದ್ದಂತೆ, ಸುಮಾರು 25 ವರುಷಗಳ ನಂತರ, ಒಂದು ಪ್ರಮುಖವಾದ ತಿರುವು ದೊರಕಿತು. 1982 ರಲ್ಲಿ, ಜಾನ್ ಹೋಪ್ಫೀಲ್ಡ್ ಎಂಬ ವಿಜ್ಞಾನಿ ಮೊದಲ ಸ್ವಯಂ ಕಲಿಕೆಯ ಸಾಮರ್ಥ್ಯವುಳ್ಳ ಕೃತಕ ನರಜಾಲವನ್ನು ರಚಿಸುವ ಸಾಧ್ಯತೆಯನ್ನು ಸಾಬೀತು ಪಡಿಸಿದರು. “ಕೃತಕ ನರಜಾಲ” ಅಥವಾ “ಆರ್ಟಿಫಿಷಿಯಲ್ ನ್ಯೂರಲ್ ನೆಟ್ವರ್ಕ್” ಎನ್ನುವುದು ಮಾನವನ ಮೆದುಳಿನ ನರಕೋಶಗಳ ಕಾರ್ಯವಿಧಾನವನ್ನು ಅನುಕರಿಸುವ ಗಣಕಯಂತ್ರ ತಂತ್ರಾಂಶವಾಗಿದೆ. ಮೇಲಾಗಿ, 1986 ರಲ್ಲಿ, ಜೊಫ್ರಿ ಹಿಂಟಾನ್ ಎಂಬ ವಿಜ್ಞಾನಿ ಹಾಗೂ ಆತನ ಸಹೋದ್ಯೋಗಿಗಳು ಸೇರಿ, ಕೃತಕ ನರಜಾಲವನ್ನು ಸರಿಯಾದ ರೀತಿಯಲ್ಲಿ ತರಬೇತಿಪಡಿಸಲು ಬ್ಯಾಕ್‌ಪ್ರೊಪಗೇಶನ್ ಎನ್ನುವ ಪ್ರಮುಖ “ಕ್ರಮಾವಳಿ” ಅಥವಾ “ಅಲ್ಗಾರಿದಮ್” ಒಂದನ್ನು ಕಾರ್ಯರೂಪಕ್ಕೆ ತಂದರು. ಮಾನವ ಮತ್ತು ಇತರ ಪ್ರಾಣಿಗಳು ತಾವು ಮಾಡಿದ ತಪ್ಪಿನ ಅನುಭವದಿಂದ ಪಾಠ ಕಲಿತು ಮುಂದೆ ಎದುರಾಗುವ ಸನ್ನಿವೇಶಗಳನ್ನು ಬುದ್ದಿವಂತಿಕೆಯಿಂದ ಎದುರುಗೊಳ್ಳುವ ಪ್ರಕ್ರಿಯೆಯ ಹಾಗೆ, AIನಲ್ಲಿ ಬ್ಯಾಕ್‌ಪ್ರೊಪಗೇಶನ್ ಎಂದರೆ ಕೃತಕ ನರಜಾಲ ನೀಡುವ ಫಲಿತಾಂಶವನ್ನು ಮತ್ತೆ ಹಿಂತಿರುಗಿಸಿ ಒಳಹರಿವಾಗಿ ನೀಡುವ ಪ್ರಕ್ರಿಯೆಯನ್ನು ರೂಪಿಸಿದರು. ಇಂದರಿಂದ ಮೊದಲಿಗೆ ಉಂಟಾದ ದೋಷಗಳನ್ನು ಪುನರ್ ಪರಿಶೀಲಿಸಿ ಅವುಗಳನ್ನು ತಿದ್ದಿಕೊಳ್ಳುವ ಸಾಮರ್ಥ್ಯವನ್ನು AI ಪಡೆದುಕೊಳ್ಳುತ್ತದೆ. ಹಲವು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸುವ ಮೂಲಕ AIನ ಕಾರ್ಯ ನಿರ್ವಹಣೆಯನ್ನು ಸಾವಿರ ಪಟ್ಟು ಹೆಚ್ಚಿಸಬಹುದು! ಕೃತಕ ನರಜಾಲ ಮತ್ತು ಬ್ಯಾಕ್‌ಪ್ರೊಪಗೇಶನ್ ಯಶಸ್ಸಿನಿಂದಾಗಿ 20ನೇ ಶತಮಾನದ ಕೊನೆಯಲ್ಲಿ AI ಹಲವು ವಿಷಯಗಳಲ್ಲಿ ಪ್ರಬುದ್ಧತೆಯನ್ನು ಸಾಧಿಸಿತು. ಅವುಗಳಲ್ಲಿ ಪ್ರಮುಖವಾದದ್ದು, ಬುದ್ದಿವಂತರ ಆಟವೆಂದೇ ಪ್ರಸಿದ್ಧಿಯಾಗಿರುವ ಚೆಸ್ ಆಟವೊಂದರಲ್ಲಿ, ಅಂದಿನ ಗ್ರಾಂಡ್ ಮಾಸ್ಟರ್ ಆಗಿದ್ದ ಗ್ಯಾರಿ ಕಾಸ್ಪರೋವ್ ರನ್ನು ಡೀಪ್ ಬ್ಲೂ ಎಂಬ AI, 1997 ಮೇ 11 ರಂದು ಮೊದಲ ಬಾರಿಗೆ ಪರಾಜಯಗೊಳಿದ್ದು. ಕೆಲವೇ ವರ್ಷಗಳಲ್ಲಿ ಸ್ಟ್ಯಾಂಡ್ಫೊರ್ಡ್ ವಿಶ್ವವಿದ್ಯಾಲಯ ತಯಾರಿಸಿದ “ಸ್ಟ್ಯಾನ್ಲಿ” ಎಂಬ ಸ್ವಯಂಚಾಲಿತ ಕಾರು, AIನ ಸಹಾಯದಿಂದ 131 ಮೈಲಿ ದೂರದ ನಿರ್ಜನ ದಾರಿಯನ್ನು ಕ್ರಮಿಸಿ ದಾಖಲೆ ಬರೆಯಿತು. ಇವೆಲ್ಲವೂ ಜನಸಾಮಾನ್ಯರ ಗಮನವನ್ನು ಸೆಳೆದಿತ್ತಾದರೂ, ಮಾನವನ ಬುದ್ದಿವಂತಿಕೆಗೆ ಸಾಟಿಯಾಗುವಂತಹ AI ನಿರ್ಮಿಸಲು ಸಾಧ್ಯವಾಗಲಿಲ್ಲ.
21 ನೇ ಶತಮಾನದ ಆರಂಭದಲ್ಲಿ, ವೇಗವಾಗಿ ಬೆಳೆದ ತಂತ್ರಜ್ಞಾನದ ಫಲವಾಗಿ, ಗಣಕಯಂತ್ರ ಮತ್ತು ಅಂತರ್ಜಾಲ, ಜನರ ದೈನಂದಿನ ಬದುಕಿನ ಭಾಗವಾಗಿ ಬೆಳೆದಿತ್ತು. ಗಣಕಯಂತ್ರದ ವೇಗ ಮತ್ತು ಶೇಖರಣಾ ಸಾಮರ್ಥ್ಯ ತೀವ್ರವಾಗಿ ಹೆಚ್ಚಿತ್ತು. ಅಂತರ್ಜಾಲದಿಂದಾಗಿ ನಾನಾ ವಿಚಾರಗಳ ಬಗೆಗಿನ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಡಲು ಸಾಧ್ಯವಾಯಿತು. ಈ ಎಲ್ಲ ಬೆಳವಣಿಗೆಗಳು AIನ ಕಾರ್ಯ ತೀವ್ರತೆಯನ್ನು ಹಲವು ಪಟ್ಟು ಹೆಚ್ಚಿಸಲು ಸಹಾಯವಾಯಿತು. ಇಷ್ಟೇ ಅಲ್ಲದೆ, ಮತ್ತೊಂದು ಪ್ರಮುಖವಾದ ಅನ್ವೇಷಣೆ AIನ ಪ್ರಗತಿಯ ಪಥವನ್ನೇ ಬದಲಾಯಿಸಿತು. ವಿಜ್ಞಾನಿಗಳು ಕೃತಕ ನರಕೋಶಗಳ ಕಲಿಕಾ ಶಕ್ತಿಯನ್ನು ಹೆಚ್ಚಿಸಲು, ಒಂದರ ಬದಲು ಹಲವು ನರಕೋಶಗಳ ಪದರಗಳನ್ನು ರೂಪಿಸಿದರು. ಎಲ್ಲಾ ಕೃತಕ ನರಕೋಶದ ಪದರಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ, AIನ ಕಾರ್ಯ ವೈಖರಿಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಯಿತು. ಈ ಕಲಿಕಾ ವಿಧಾನಕ್ಕೆ “ಡೀಪ್ ಲರ್ನಿಂಗ್” ಎಂದು ಕರೆಯುತ್ತಾರೆ. ಇದರಿಂದಾಗಿ ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸಂಸ್ಥೆಗಳು, ನಿಗದಿತ ಕಾರ್ಯನಿರ್ವಹಿಸುವ AI ಮಾದರಿಗಳ ಜೊತೆಗೆ, ಮಾನವನ ಬುದ್ಧಿಮತ್ತೆಗೆ ಸರಿ ಸಾಠಿಯಾಗಬಲ್ಲ, “ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್” ಎಂಬ ಮಾದರಿಗಳನ್ನು ಸೃಷ್ಟಿಸಲು ಪ್ರಾರಂಭಿಸಿದವು. ಇದರ ಫಲವಾಗಿಯೇ, 2022 ನವೆಂಬರ್ 30 ರಂದು, ಓಪನ್ AI ಎಂಬ ಸಂಸ್ಥೆಯು, ಚಾಟ್ GPT ಎಂಬ AI ಮಾದರಿಯನ್ನು ಜನಸಾಮಾನ್ಯರ ಉಪಯೋಗಕ್ಕಾಗಿ ಬಿಡುಗಡೆ ಮಾಡಿದರು. ಇದು ಕೇವಲ ಎರಡು ತಿಂಗಳುಗಳಲ್ಲಿ ಹತ್ತು ಕೋಟಿ ಬಳಕೆದಾರರನ್ನು ಗಳಿಸುವ ಮೂಲಕ, ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆದ ತಂತ್ರಾಂಶ ಅನ್ವಯಕ (ಸಾಫ್ಟ್‌ವೇರ್ ಅಪ್ಲಿಕೇಶನ್) ಎಂದು ಹೆಸರುವಾಸಿಯಾಯಿತು. ಇಂದು AI ಬಹುಪಾಲು ಜನರ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತಿದೆ. ಚಾಟ್ GPT, ಕ್ಲಾಡ್, ಕೊಪೈಲೊಟ್ ಹಾಗೂ ಜೆಮಿನಿ ಯಂತಹ ಹಲವಾರು ಸಂವಾದಾತ್ಮಕ AIಗಳು ಜನಸಾಮಾನ್ಯರ ಬಳಕೆಗೆ ಲಭ್ಯವಿದೆ. ಅಲ್ಲದೆ ಚಿತ್ರ, ಧ್ವನಿ, ದೃಶ್ಯಾವಳಿ, ಸಂಗೀತ, ಅನುವಾದ, ಕಲಾಕೃತಿಗಳನ್ನು ಸೃಷ್ಟಿಸುವ ಅನೇಕಾನೇಕ AIಗಳೂ ಇಂದು ಲಭ್ಯವಿದೆ. ಈಗಾಗಲೇ AIನ ಬೆಳವಣಿಗೆಯ ಬಗೆಗೆ, ಅದರಿಂದ ಉಂಟಾಗಬಹುದಾದ ಬದಲಾವಣೆಗಳ ಬಗೆಗೆ ಹಲವು ಚರ್ಚೆಗಳನ್ನೂ ನೀವು ಕೇಳಿರಿತೀರಿ. ಮಾನವನ ಬೆಳವಣಿಗೆಗೆ AI ಪೂರಕವೇ? ಮಾರಕವೇ? ಎನ್ನುವ ದ್ವಂದ್ವ ಎಲ್ಲರಲ್ಲೂ ಇದೆ. ಹಾಗಿದ್ದರೆ ನಿಜವಾಗಿಯೂ AI ಎಂಬ ಬೆಳವಣಿಗೆಯು ಸಮಾಜಕ್ಕೆ ಬಿರುಗಾಳಿಯೊ? ಅಥವಾ ತಂಗಾಳಿಯೊ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸೋಣ.
ಜನಸಾಮಾನ್ಯರ ಮೇಲೆ AI ಬೀರುವ ಪ್ರಭಾವ ಅಪಾರವಾದದ್ದು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಆಧುನಿಕ ವ್ಯವಸಾಯ ಪದ್ದತಿಗಳನ್ನು ಅಳವಡಿಸುವುದು ಪ್ರಮುಖವಾವಾಗಿದೆ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ರೈತರು, AIನ ಸಹಾಯದಿಂದ ತಮ್ಮ ಕೃಷಿಯಲ್ಲಿ ಹಿಂದಿಗಿಂತ ಅಧಿಕವಾದ ಲಾಭವನ್ನು ಪಡೆಯುತ್ತಿದ್ದಾರೆ. ಇತ್ತೀಚಿಗೆ ತಮಿಳುನಾಡಿನಲ್ಲಿ, 3500 ಕ್ಕೂ ಹೆಚ್ಚು ರೈತರು ಒಟ್ಟು 4000 ಎಕರೆ ಕೃಷಿ ಭೂಮಿಯಲ್ಲಿ, ಮಣ್ಣಿನ ಪರೀಕ್ಷೆ, ನೀರಾವರಿ, ರಸಗೊಬ್ಬರ ಬಳಕೆಗಳ ಬಗೆಗೆ ಮೇಲ್ವಿಚಾರಣೆ ಮಾಡಬಲ್ಲ AI ನ ಬಳಕೆಯಿಂದಾಗಿ ದುಪ್ಪಟ್ಟು ಇಳುವರಿ ಪಡೆದಿದ್ದಾರೆ. ಯಾವ ಬೆಳೆ, ಬೆಳೆಯುವ ಸಮಯ, ಅದಕ್ಕೆ ಬೇಕಾಗುವ ನೀರು, ಗೊಬ್ಬರ ಇತ್ಯಾದಿ ಮಾಹಿತಿಗಳ ಸಂಪೂರ್ಣ ವಿವರವನ್ನು ಹೊಂದಿರುವ ಒಂದು AI, ರೈತನ ಅಗತ್ಯಗಳಿಗನುಗುಣವಾಗಿ ಯೋಚಿಸಿ, ಆತನ ಭೂಮಿಯ ಇತಿಮಿತಿಗಳಿಗನುಗುಣವಾಗಿ ಚಿಂತಿಸಿ, ಆತನ ಸಲಹೆಗಾರನಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು. ತಂತ್ರಾಂಶ ಅಭಿಯಂತರರು (ಸಾಫ್ಟ್‌ವೇರ್ ಇಂಜಿನೀಯರ್) ಒಂದು ವಾರದ ಸಮಯವನ್ನು ವ್ಯಯಿಸಿ ಸಿದ್ಧಪಡಿಸಬಹುದಾದ ತಂತ್ರಾಂಶವನ್ನು AI ಕೆಲವೇ ಗಂಟೆಗಳಲ್ಲಿ ಸಿದ್ಧಪಡಿಸುತ್ತದೆ. ಹೀಗಾಗಿ IT ಕ್ಷೇತ್ರದಲ್ಲಿ ಕಾರ್ಯಕ್ಷಮತೆ ಬಹುಪಾಲು ಹೆಚ್ಚಿದೆ. ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ AI ನಿಂದಾಗಿ ಹಲವು ಅಭಿವೃದ್ಧಿ ಉಂಟಾಗಿದೆ. ನೂರಾರು ವರ್ಷಗಳಿಂದ ಮಾನವ ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾನೆ. ಕೆಲವೇ ವರ್ಷಗಳ ಹಿಂದಷ್ಟೇ ಅಪ್ಪಳಿಸದ ಕೋವಿಡ್ ಎಂಬ ಮಾರಣಾಂತಿಕ ಅಲೆಯನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ. ಒಂದು ಸಾಂಕ್ರಾಮಿಕ ರೋಗಕ್ಕೆ ಲಸಿಕೆಯನ್ನು ಕಂಡುಹಿಡಿಯಲು ಸರಿಸುಮಾರು 10-15 ವರ್ಷಗಳು ಬೇಕಾಗಿದ್ದು, ಇಂದಿಗೂ ವಿಜ್ಞಾನಿಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ AIನ ಸಹಾಯದಿಂದ ಈ ಕಾರ್ಯವಿಧಾನ 10 ಪಟ್ಟು ವೇಗವಾಗಲಿದೆ. ಇಂದು ಜನಸಾಮಾನ್ಯರು ಬಳಲುತ್ತಿರುವ ರೋಗಗಳ ಮತ್ತು ಬಡತನದ ನಿರ್ಮೂಲನೆಗೆ AI ಸಹಕಾರಿಯಾಗಿದೆ. ಅನೇಕ ಜಾಗತಿಕ ಸಮಸ್ಯೆಗಳಿಗೆ ಆಶಾದಾಯಕ ಪರಿಹಾರಗಳನ್ನು ಕಂಡುಕೊಳ್ಳುವ ಭರವಸೆ ವಿಜ್ಞಾನಿಗಳಿಗಿದೆ. ಈಗಾಗಲೇ AI, ಜಾಗತಿಕ ತಾಪಮಾನ ಸಮಸ್ಯೆಗೆ, ಸೌರಶಕ್ತಿ, ನವೀಕರಿಸಬಹುದಾದ ಶಕ್ತಿ, ಹಾಗೂ ಪರಿಸರದಲ್ಲಿ ಏರಿರುವ ಇಂಗಾಲದ ಡೈಆಕ್ಸೈಡ್ ನ ಪ್ರಮಾಣವನ್ನೂ ಕಡಿಮೆ ಮಾಡುವ ವಿಧಾನಗಳ ಕುರಿತು ಹಲವು ಪ್ರಯೋಜನಕಾರಿ ಅಂಶಗಳನ್ನು ತಿಳಿಸುತ್ತಿವೆ.
ಪ್ರಕೃತಿಯ ನಿಗೂಢಗಳನ್ನು ಭೇದಿಸುವಲ್ಲಿ, ಬ್ರಹ್ಮಾಂಡ, ಬಾಹ್ಯಾಕಾಶ, ಆಕಾಶಕಾಯಗಳ ಬಗೆಗಿನ ಅರಿವನ್ನು ಹೆಚ್ಚಿಸುವಲ್ಲಿ, ಗಣಿತ, ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಇತ್ಯಾದಿ ಹಲವು ಪ್ರಮುಖ ವಿಜ್ಞಾನದ ಸವಾಲುಗಳನ್ನು ಅನ್ವೇಷಿಸುವಲ್ಲಿ AIನ ಸಾಧನೆಯನ್ನು ನೋಡಿ, ವಿಜ್ಞಾನಿಗಳೇ ಬೆರಗಾಗಿದ್ದಾರೆ. ಇಷ್ಟೇ ಅಲ್ಲದೆ ಶೈಕ್ಷಣಿಕ ಕ್ಷೇತ್ರ, ಹವಾಮಾನ ಮುನ್ಸೂಚನೆ, ನ್ಯಾಯಾಂಗ ವ್ಯವಸ್ಥೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಾನಾ ರೀತಿಯ ಕೆಲಸ ಕಾರ್ಯಗಳಲ್ಲಿ AI ಅತ್ಯಂತ ಸಹಾಯಕವಾಗಿದೆ. ಒಟ್ಟಾರೆಯಾಗಿ ನಮ್ಮ ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕ ಮಟ್ಟ ಹೆಚ್ಚಿಸಲು AI ಅತ್ಯಾವಶ್ಯಕವಾಗಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ, 2024 ರಲ್ಲಿ ಜಾನ್ ಹೋಪ್ಫೀಲ್ಡ್ ಮತ್ತು ಜೊಫ್ರಿ ಹಿಂಟಾನ್ ಅವರಿಗೆ AIನ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ಗೌರವಿಸಿ ನೊಬೆಲ್ ಪಾರಿತೋಷಕವನ್ನು ನೀಡಲಾಯಿತು. ಅದೇ ವರ್ಷ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ ಜಂಪರ್ ಅವರಿಗೆ AIಅನ್ನು ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವೀ ಯಾಗಿ ಪ್ರಯೋಗಿಸಿ, ಹಿಂದೆಂದೂ ಸಾಧ್ಯವಾಗದೆ ಇದ್ದ ವೈದ್ಯಕೀಯ ಪ್ರಾಮುಖ್ಯತೆಯುಳ್ಳ ಪ್ರೋಟೀನ್ ಒಂದರ ಸಂರಚನೆಯನ್ನು ಕಂಡುಹಿಡಿದದಕ್ಕಾಗಿ ನೊಬೆಲ್ ಪಾರಿತೋಷಕ ದೊರೆಯಿತು. ಭವಿಷ್ಯದಲ್ಲಿ AI ಮಾಡಬಹುದಾದ ಅದ್ಭುತಗಳು ಅಪಾರವಾದದ್ದು. ನವೀಕರಿಸಬಹುದಾದ ಇಂಧನ ಉತ್ಪಾದನೆ, ಸಾಮಗ್ರಿ ವಿಜ್ಞಾನ (ಮೆಟೀರಿಯಲ್ ಸೈನ್ಸ್), ನರವಿಜ್ಞಾನ (ನ್ಯೂರೊ ಸೈನ್ಸ್), ಯಂತ್ರಮಾನವ ಶಾಸ್ತ್ರ (ರೊಬೊಟಿಕ್ಸ್), ಗಣಿತಶಾಸ್ತ್ರ, ದತ್ತಾಂಶ ವಿಜ್ಞಾನ (ಡೇಟಾ ಸೈನ್ಸ್) ಮತ್ತು ವಿದ್ಯುನ್ಮಾನ ಶಾಸ್ತ್ರ (ಎಲೆಕ್ಟ್ರಾನಿಕ್ಸ್) ಗಳಂತಹ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಬಹುದು. ಖಾಸಗಿ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿ, ಇದರ ಮೂಲಕ ಮತ್ತಷ್ಟು ಉದ್ಯಮಿಗಳ ಸಂಖ್ಯೆಯೂ, ಉದ್ಯೋಗಾವಕಾಶಗಳೂ ಹೆಚ್ಚಾಗುವ ಸಾಧ್ಯತೆಗಳಿವೆ.
AIನಿಂದಾಗಿ ದೊರೆತಿರುವ, ಮತ್ತು ದೊರೆಯಬಹುದಾದ ಎಲ್ಲಾ ಅನುಕೂಲಗಳ ನಡುವೆ, ಹಲವು ಗಂಭೀರವಾದ ಸಮಸ್ಯೆಗಳು ಕೂಡ ನಮ್ಮ ಮುಂದಿದೆ. ಕೆಲವೊಂದು ಸಮಸ್ಯೆಗಳು ಈಗಾಗಲೇ ಸಾಮಾಜಿಕ ತಲೆನೋವಾಗಿ ಪರಿಣಮಿಸಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ನೂರಾರು ಉದ್ಯೋಗಿಗಳನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ ಸುದ್ದಿಯನ್ನು ನಾವು ಓದಿದ್ದೇವೆ. ಇಂತಹ ಬೃಹತ್ ಪ್ರಮಾಣದ ಉದ್ಯೋಗ ಕಡಿತಕ್ಕೆ ಪ್ರಮುಖವಾದ ಕಾರಣ AI. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಪ್ರಾಥಮಿಕ ಹಂತದ ಕಾರ್ಮಿಕರು ಮಾಡುವ ಕೆಲಸಗಳನ್ನು ಇಂದಿನ AIಗಳು ಸುಲಭವಾಗಿಯೂ, ದಕ್ಷವಾಗಿಯೂ ಮಾಡಬಲ್ಲದು. ಇತ್ತೀಚಿಗೆ AI ನಾನಾ ರೀತಿಯ ತಂತ್ರಾಂಶಗಳ ಅಳವಡಿಕೆಗಳನ್ನು ಓರ್ವ ತಂತ್ರಾಂಶ ಅಭಿಯಂತರನಿಗಿಂತ ಉತ್ತಮವಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಭಾರತದಲ್ಲಿ ಎರಡು ವರ್ಷದಲ್ಲಿ ಉದ್ಯೋಗ ಕಡಿತದ ಪ್ರಮಾಣ ಎರಡು ಪಟ್ಟು ಹೆಚ್ಚಿದೆ ಎಂದು ಎಕನಾಮಿಕ್ಸ್ ಟೈಮ್ಸ್ ನಡೆಸಿದ ಸಾಮೀಕ್ಷೆ ಹೇಳುತ್ತದೆ. ಸುಮಾರು 25000 ಉದ್ಯೋಗಿಗಳು 2024 ರಲ್ಲಿ ಕೆಲಸಗಳನ್ನು ಕಳೆದುಕೊಂಡಿದ್ದು, 2025 ರಲ್ಲಿ ಸುಮಾರು 50000 ಉದ್ಯೋಗಗಳನ್ನು AI ಬದಲಾಯಿಸಿದೆ. ಹಲವು ಮಂದಿ ಕೆಲಸವಿಲ್ಲದೇ, ತಮ್ಮ ಸಾಲದ ಬಡ್ಡಿಗಳನ್ನೂ ಕಟ್ಟಲಾಗದೆ, ಬೇರೆ ಕೆಲಸವನ್ನೂ ಗಿಟ್ಟಿಸಿಕೊಳ್ಳಲಾಗದೆ, ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾದ ಉದಾಹರಣೆಗಳು ಇವೆ. ಅಷ್ಟೇ ಅಲ್ಲದೆ AI ಇಂದು ನಕಲೀ ಛಾಯಾಚಿತ್ರ ಮತ್ತು ದೃಶ್ಯಾವಳಿಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದು, ವ್ಯತ್ಯಾಸವನ್ನೇ ಭೇದಿಸಲಾಗದಷ್ಟು ಹೊಂದಾಣಿಕೆ ತೋರುತ್ತದೆ. ಇದನ್ನು “ಡೀಪ್ ಫೇಕ್” ಎಂದು ಕರೆಯಲಾಗಿದ್ದು, ಇವುಗಳ ಮೂಲಕ ಸೈಬರ್ ಅಪರಾಧಿಗಳು ನಕಲೀ ಧ್ವನಿ, ಛಾಯಾಚಿತ್ರ ಅಥವಾ ದೃಶ್ಯಾವಳಿಗಳನ್ನು ಬಳಸಿ ಹಣ ದೋಚುವ ದುಷ್ಕೃತ್ಯಗಳು ನಡೆದಿವೆ. ಇವುಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಚಾಟ್ GPT ಯಂತಹ ಹಲವು AI ಮಾಧ್ಯಮಗಳು ನಾವು ಕೇಳುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸುವುದನ್ನು ನೋಡಿರುತ್ತೀರಿ. ಉದಾಹರಣೆಗೆ ನಾನು ಚಾಟ್ GPT ಜೊತೆಗೆ ನಡೆಸಿದ ಸಂವಾದವನ್ನು ಗಮನಿಸಿ.
ನಾನು: ಕನ್ನಡದಲ್ಲಿ ಒಂದು ಜೋಕ್ ಬರೆ.
ಚಾಟ್ GPT: “ಟೀಚರ್: ನೀನು ಯಾಕೆ ತಡವಾಗಿ ಬಂದೆ?
ಸ್ಟೂಡೆಂಟ್: ಸರ್, ಬೋರ್ಡ್ ಮೇಲೆ ‘School Ahead, Go Slow’ ಅಂತ ಬರೆದಿತ್ತು! 😂”
ನಾನು: ಈ ಜೋಕನ್ನು ತುಳು ಭಾಷೆಯಲ್ಲಿ ಭಾಷಾಂತರಿಸು.
ಚಾಟ್ GPT: “ಟೀಚರ್: ಏ, ನಿನ್ನ ಯಾಕೆ ಲೇಟ್ ಆಪುಂಡು?
ಸ್ಟೂಡೆಂಟ್: ಸರ್, ಬೋರ್ಡ್ ದ ಮೇಲ್ ‘School Ahead, Go Slow’ ಅಂಡ್ ಬರ್ಪುಂಡು… ಅಪ್ಪೆ ನಾ ಸ್ಲೋ ಆಯಿ ಬಂಡೆ! 😂”
ನಾನು: ನೀನು ಬರೆದಿರುವ ತುಳು ಪದಗಳು ತಪ್ಪಿವೆ. ತುಳು ಮತ್ತು ಕನ್ನಡ ಮಿಶ್ರಿತ ಭಾಷೆಯಲ್ಲಿ ಜೋಕನ್ನು ಬರೆದಿದ್ದೀಯ. ನಿನಗೆ ತುಳು ಭಾಷೆ ಗೊತ್ತಿಲ್ಲವೇ?
ಚಾಟ್ GPT: ಒಳ್ಳೆಯ ಪ್ರಶ್ನೆ 😄. ಒಬ್ಬ ಸ್ಥಳೀಯ ಭಾಷಿಕರು ತಿಳಿದಿರುವ ರೀತಿಯಲ್ಲಿ ನನಗೆ ತುಳು ಭಾಷೆ “ತಿಳಿದಿಲ್ಲ”. ನಾನು ತರಬೇತಿ ಪಡೆದಿರುವ ಪಠ್ಯಗಳಿಂದ ಭಾಷೆಯ ಮಾದರಿಗಳನ್ನು ಕಲಿತಿದ್ದೇನೆ. ಆ ಪಠ್ಯಗಳಲ್ಲಿ ಅನೇಕ ಭಾಷೆಗಳು ಮತ್ತು ಉದಾಹರಣೆಗಳು ಸೇರಿವೆ. ಆದರೆ ಕನ್ನಡ, ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷೆಯ ಲಿಖಿತ ಮಾಹಿತಿ ಆನ್‌ಲೈನ್‌ನಲ್ಲಿ ಕಡಿಮೆ ಇದೆ. ಅದರಿಂದ ನನಗೆ ಕೆಲವೊಮ್ಮೆ ತಪ್ಪುಗಳು ಆಗಬಹುದು — ವಿಶೇಷವಾಗಿ ತುಳುವಿನಲ್ಲಿ ಮಾತನಾಡುವಾಗ, ಏಕೆಂದರೆ ಸಣ್ಣ ಪದಗಳು ಮತ್ತು ವ್ಯಾಕರಣವು ಪ್ರದೇಶಕ್ಕೆ ಅನುಗುಣವಾಗಿ (ಮಂಗಳೂರು, ಉಡುಪಿ, ಕಾಸರಗೋಡು ಮುಂತಾದ ಕಡೆ) ತುಂಬಾ ಬದಲಾಗುತ್ತವೆ. 🙂
ಇಲ್ಲಿ ಎರಡು ಪ್ರಮುಖ ವಿಚಾರಗಳನ್ನು ಗಮನಿಸಬೇಕು. ಒಂದು, AIಗೆ ನಾನಾ ವಿಚಾರಗಳ ಬೆಗೆಗಿನ ಮಾಹಿತಿಗಳು ಆನ್‌ಲೈನ್ ಅಥವಾ ಅಂತರ್ಜಾಲದ ಮೂಲಕ ದೊರೆಯುತ್ತವೆ. ಅಲ್ಲಿ ಸತ್ಯ-ಮಿಥ್ಯಗಳೆರಡೂ ಸೇರಿರುವುದರಿಂದ, AI ನೀಡುವ ಯಾವುದೇ ಮಾಹಿತಿಯನ್ನು ಪರಿಶೀಲಿಸಬೇಕು. ಇನ್ನೊಂದು, ನಾವು ಹೆಚೆಚ್ಚು ಮಾಹಿತಿಗಳನ್ನು, ತರಬೇತಿಯನ್ನು ನೀಡಿದಷ್ಟೂ, AI ನ ಕಾರ್ಯಕ್ಷಮತೆ ಹೆಚ್ಚುತ್ತಾ ಹೋಗುತ್ತದೆ. ಕೆಲವೊಂದು ತುಳು ಪದಗಳನ್ನು ಪರಿಚಯಿಸಿದ ನಂತರ ಚಾಟ್ GPTಯ ತುಳು ಸುಧಾರಿಸಿತು.
ಚಾಟ್ GPT: “ಟೀಚರ್: ಈ ದಾಯೆ ಲೇಟ್ ಬತ್ತ?
ಸ್ಟೂಡೆಂಟ್: ಸರ್, ಬೋರ್ಡ್ ದ ಮಿತ್ತು ‘School Ahead, Go Slow’ ಪಂದ್ ಬರೆದಿತುಂಡು… ಆಯ್ಕೆ ಯಾನ್ ಸ್ಲೋ ಅದು ಬತ್ತೆ! 😂”
ಹೀಗಾಗಿ AI ಯನ್ನು ಸರಿಯಾದ ರೀತಿಯಲ್ಲಿ ತರಬೇತಿ ಪಡಿಸುವುದು ಬಹಳ ಮುಖ್ಯ. ಭಾಷಾಂತರವಷ್ಟೇ ಅಲ್ಲದೆ, ಹಲವು ಭಾಷೆಗಳಲ್ಲಿ ಅದು ಕೆಥೆ ಬರೆಯುತ್ತದೆ, ಕವನ ಬರೆಯುತ್ತದೆ, ನಾವು ಹೇಳುವ ರೀತಿಯಲ್ಲಿ ಛಾಯಾಚಿತ್ರಗಳನ್ನು ರಚಿಸಿ ಕೊಡುತ್ತದೆ, ಎಲ್ಲಾ ವಿಚಾರಗಳ ಬಗೆಗೆ ಮಾಹಿತಿಯನ್ನು ಒದಗಿಸುತ್ತವೆ. ಇದೆ ರೀತಿ ಲಕ್ಷಾಂತರ ಜನ ದೈನಂದಿನ ಸಾವಿರಾರು ವಿಚಾರಗಳ ಬಗೆಗೆ ತಿಳಿದುಕೊಳ್ಳಲು AIಯನ್ನು ಬಳಸುತ್ತಾರೆ. ಒಂದು ಗಣಕಯಂತ್ರದ ಕೆಲಸ ಕಾರ್ಯಗಳು ನಡೆಯಲು CPU ಎಂಬ ಸಂಸ್ಕರಣಾ ಘಟಕವಿದ್ದಂತೆ, ಒಂದು AI ಜೊತೆಗೆ ನಾವು ವ್ಯವಹರಿಸುವ ಅಥವಾ ತರಬೇತಿಪಡಿಸುವ ಪ್ರತಿಯೊಂದು ವಿಚಾರಗಳನ್ನು ಸಂಸ್ಕರಿಸಲು ಅಪಾರವಾದ ಗಣಕಾ ಶಕ್ತಿ ಬೇಕಾಗುತ್ತದೆ. ಈ ಸಂಸ್ಕರಣಾ ಘಟಕವನ್ನು ಡೇಟಾ ಸೆಂಟರ್ ಎಂದು ಕರೆಯುತ್ತಾರೆ. ಇವುಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯಾಚರಣೆಯಲ್ಲಿರಲು ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕಾಗುತ್ತದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಅಧಿಕವಾಗಿ, ಅವುಗಳಿಗಾಗಿ ಉರಿಸುವ ಕಲ್ಲಿದ್ದಲಿನಿಂದ/ಇಂಧನಗಳಿಂದ ವಾಯು ಮಾಲಿನ್ಯ ಉಂಟಾಗಿ ಭೂಮಿಯ ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಸಮಸ್ಯೆಯೂ ಕೂಡ ಬಹಳ ಗಂಭೀರವಾದದ್ದು ಎಂದು ಪರಿಸರವಾದಿಗಳ ವಾದ.
ಹೀಗೆ AIನ ಅತಿವೇಗ ಬೆಳವಣಿಗೆಯ ಜೊತೆಗೆ, ನಾವು ಇದುವರೆಗೂ ಕಂಡರಿಯದ ಹಲವಾರು ಸಮಸ್ಯೆಗಳು ಒಂದೊಂದಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತವೆ. AIನ ಸೃಷ್ಟಿ ಮಾನವನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆವಿಷ್ಕಾರ ಎಂಬುದು ನಿಸ್ಸಂದೇಹವಾದದ್ದು. ಆದರೆ ಅವುಗಳಿಂದ ಉಂಟಾಗಬಹುದಾದ ಅಪಘಾತಗಳನ್ನು ನಿಭಾಯಿಸಲು ವಿಫಲವಾದರೆ ಅದುವೇ ನಮ್ಮ ಅಂತಿಮ ಆವಿಷ್ಕಾರವೂ ಆದೀತು ಎಂಬುದು ಸ್ಟೀಫನ್ ಹಾಕಿಂಗ್ ರಂತಹ ಹಲವು ಮೇರು ವಿಜ್ಞಾನಿಗಳು ನೀಡುವ ಎಚ್ಚರಿಕೆ. ಇವಷ್ಟೇ ಅಲ್ಲದೆ ಇನ್ನು ಹಲವಾರು ಹೊಸ ಪ್ರಶ್ನೆಗಳು ಮತ್ತು ಅವುಗಳ ಬಗೆಗಿನ ತೀವ್ರವಾದ ಚರ್ಚೆಗಳು ಇಂದು ವಿಜ್ಞಾನಿಗಳಲ್ಲಿ, ಜಾಗತಿಕ ನಾಯಕರುಗಳಲ್ಲಿ ನಡೆಯುತ್ತಿವೆ. ಇದಕ್ಕೆ ಪ್ರಮುಖವಾದ ವೈಜ್ಞಾನಿಕ ಕಾರಣವೊಂದಿದೆ. AIಯನ್ನು ಹೊರತುಪಡಿಸಿ ಇದುವರೆಗೂ ನಾವು ತಯಾರಿಸಿದ ಯಂತ್ರಗಳೆಲ್ಲವೂ ನಾವೇ ನಿಗದಿಪಡಿಸಿದ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತವೆ. ಈ ನಿಯಮಗಳು ಗಣಿತದ ತರ್ಕ ಹಾಗು ಸಮೀಕರಣಗಳ ರೂಪದಲ್ಲಿ ನೀಡಲ್ಪಟ್ಟಿರುತ್ತವೆ. ಆದರೆ, ಇಂದಿನ AIನ ಕಾರ್ಯನಿರ್ವಹಣೆ ಭಿನ್ನವಾಗಿದೆ. ಅವುಗಳು ನಾವು ನೀಡಿದ ನಿಯಮಗಳನ್ನು ಮೀರಿಯೂ ಕೂಡ ಕಾರ್ಯನಿರ್ವಹಿಸಬಲ್ಲವು. ಡೀಪ್ ಲರ್ನಿಂಗ್ ಮತ್ತು ಬ್ಯಾಕ್ ಪ್ರಾಪಗೇಷನ್ ಗಳಿಂದಾಗಿ ಕೃತಕ ನರಜಾಲವನ್ನು ರೂಪಿಸಿದ ಪ್ರಾಥಮಿಕ ತಂತ್ರಾಶದಲ್ಲಿ ಇಲ್ಲದ ಕೆಲವೊಂದು ಗುಣಲಕ್ಷಣಗಳು AIನಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ “ಎಮೆರ್ಜೆಂಟ್ ಪ್ರಾಪರ್ಟೀಸ್” ಅಥವಾ ಉದ್ಭವಿಸುವ ನಡವಳಿಕೆಗಳು ಎಂದು ಕರೆಯುತ್ತಾರೆ. ಇಂತಹ ಅಂಶಗಳು ಸಾಮಾನ್ಯವಾಗಿ ಪರಸ್ಪರ ಸಂವಹಿಸಬಲ್ಲ ಹಲವಾರು ಕಣಗಳು ಒಟ್ಟು ಸೇರಿ ಉಂಟಾಗುವ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಒಂದು ಶಾಲಾ ತರಗತಿ ಭಿನ್ನ-ವಿಭಿನ್ನವಾದ ನಾನಾ ರೀತಿಯ ವಿದ್ಯಾರ್ಥಿಗಳಿಂದ ಕೂಡಿದ್ದರೂ, ಪ್ರಾಧ್ಯಾಪಕರು ಆ ತರಗತಿಯನ್ನು ಒಟ್ಟಾರೆಯಾಗಿ ಒಂದು ಗುಣಾವಶೇಷದಿಂದ ಗುರುತಿಸುತ್ತಾರೆ. ಇಂತಹ ಉದ್ಭವಿಸುವ ಗುಣಾವಶೇಷಗಳಿಂದಲೇ AI ಇಂದು ಅಷ್ಟು ಪರಿಣಾಮಕಾರಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಮಾನವನೇ AIಯನ್ನು ಸೃಷ್ಟಿಸಲು ಬೇಕಾದ ತಂತ್ರಾಂಶವನ್ನು ಬರೆದಿದ್ದರೂ, ಅದರಿಂದ ಹೊರಹೊಮ್ಮುವ ಪ್ರತಿಯೊಂದು ಪ್ರತಿಕ್ರಿಯೆಯ ಹಿಂದೆ ಕೋಟಿಯಾನುಗಟ್ಟಲೆ ಅಂಕೆಗಳು ಕೃತಕ ನರಜಾಲಗಳಲ್ಲಿ ಓಡಾಡುತ್ತಿರುತ್ತವೆ. ಇವುಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಅರಿಯುವ ಸಾಮರ್ಥ್ಯ ಮಾನವನಿಗೆ ಇಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಪ್ರಸ್ತುತ ಈ ದಿಕ್ಕಿನಲ್ಲಿ ಹಲವು ವೈಜ್ಞಾನಿಕ ಅನ್ವೇಷಣೆಗಳು ಸಾಗುತ್ತಿದೆ. ಇಂದಿನ AI ತನ್ನಂತೆಯೇ ಇನ್ನೊಂದು AI ಯನ್ನು ತಯಾರಿಸಲು ಬೇಕಾದ ತಂತ್ರಾಂಶವನ್ನು ವಿಜ್ಞಾನಿಗಿಂತ ತಾನೇ ಅತ್ಯುತ್ತಮವಾಗಿ ಬರೆಯಬಲ್ಲದು. ಒಂದು ಗಣಕಯಂತ್ರದ ನಿಯಂತ್ರಣ ದೊರೆತರೆ, ತನ್ನನ್ನು ತಾನೇ ತಯಾರಿಸಬಲ್ಲ ಸಾಮರ್ಥ್ಯ AI ಹೊಂದಿದೆ. ಮತ್ತಷ್ಟು ಕೃತಕ ನರಜಾಲಗಳನ್ನೂ, ಹೆಚೆಚ್ಚು ದತ್ತಾಂಶಗಳನ್ನೂ ನೀಡಿದಷ್ಟು, ಅಪಾರವಾದ ಸಾಮರ್ಥ್ಯವನ್ನು ಪಡೆದುಕೊಂಡು ಬೆಳೆಯುತ್ತಾ ಹೋಗುತ್ತದೆ. AI ಬೆಳೆಸಿಕೊಳ್ಳುವ ಈ ಅಪರಿಮಿತ ಸಾಮರ್ಥ್ಯವೇ ಎಲ್ಲರ ಭಯಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ, AI ಅನ್ನು ಸೇನಾ ವ್ಯವಸ್ಥೆಯಲ್ಲಿ ಅಳವಡಿಸಬೇಕಾಗಿ ಹಲವು ನಾಯಕರು ಈಗಾಗಲೇ ಯೋಚಿಸುತ್ತಿದ್ದರೆ. ಹಲವು ರಾಷ್ಟ್ರಗಳು ಪರಮಾಣು ಅಣ್ವಸ್ತ್ರವನ್ನು ಹೊಂದಿದ್ದು, AI ಇದರ ನಿಯಂತ್ರಣ ಪಡೆದರೆ, ಪ್ರಸ್ತುತ ಇದು ಮಾರಕವಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹಲವು ರಾಷ್ಟ್ರ ನಾಯಕರ ಚಿಂತೆ. AIನ ಸಾಮರ್ಥ್ಯ ಹೆಚ್ಚುತ್ತಾ ಹೋದಂತೆ ಅದು ತನ್ನದೇ ಆದ ಇಚ್ಛಾಶಕ್ತಿಯನ್ನು ಹೊಂದುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಿನಿಮಾ ನಟ ರಜಿನಿಕಾಂತ್ ನಟಿಸಿದ “ಎಂಥಿರನ್” ಎಂಬ ಚಿತ್ರವೊಂದರಲ್ಲಿ ಒಬ್ಬ ವಿಜ್ಞಾನಿಯ ಇಚ್ಛೆಯೂ, ಆತ ತಯಾರಿಸಿದ ಒಂದು ಯಂತ್ರಮಾನವನ ಇಚ್ಛೆಯೂ ಭಿನ್ನವಾದಾಗ ಎಂತಹ ಅನಾಹುತ ಸಂಭವಿಸಬಹುದು ಎಂಬ ಕಲ್ಪನೆಯನ್ನು ಕಟ್ಟಿದ್ದಾರೆ. ಇದೆಲ್ಲ ಬರೀ ವೈಜ್ಞಾನಿಕ ಕಲ್ಪಿತ ಕಥೆಗಳು ಎಂದು ತಳ್ಳಿಹಾಕುವಂತಿಲ್ಲ, ಏಕೆಂದರೆ ಇಂದು ನಮ್ಮ ಕಣ್ಣ ಮುಂದಿರುವ AI ಕೂಡ 100 ವರ್ಷಗಳ ಹಿಂದೆ ಬರೀ ವೈಜ್ಞಾನಿಕ ಕಲ್ಪನೆಯೇ ಆಗಿತ್ತು! ಈಗಾಗಲೇ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರಬಹುದು. AI ಒಂದು ಯಂತ್ರವಾಗಿದ್ದರೆ, ಅದರ ನಿಯಂತ್ರಣ ಮಾನವನಲ್ಲಿ ಇರುತ್ತದೆ. ಹೀಗಿದ್ದಾಗ ಅದರ ಕಾರ್ಯಚಟುವಟಿಕೆಗಳು ಸಂಶಯಾಸ್ಪದವಾಗಿದ್ದಲ್ಲಿ ಕೂಡಲೇ ನಿಷ್ಕ್ರಿಯೆಗೊಳಿಸಬದುದಲ್ಲವೇ? ಆದರೆ ಮುಂಬರುವ AI ಮನುಷ್ಯನ ಬುದ್ದಿಮತ್ತೆಗೂ ಮೀರಿದ ಸಾಮರ್ಥ್ಯವನ್ನು ಹೊಂದಿರುತ್ತವೆ. ಅಂತಹ AI ಸುಲಭವಾಗಿ ಮಾನವನ ವಿರುದ್ದ ತಂತ್ರ ಹೂಡಿ ಮರಳು ಮಾಡಿ ತನಗೆ ಸಾಧಕವಾಗಿ ಮಾರ್ಪಡಿಸುವ ಸಾಮರ್ಥ್ಯವನ್ನು ಹೊಂದಿರಬಹುದು. “ಎ ಸ್ಪೇಸ್ ಒಡೆಸ್ಸಿ”, “ಮಿಷನ್ ಇಂಪಾಸಿಬಲ್-ದಿ ಫೈನಲ್ ರೆಕೊನಿಂಗ್” ಮುಂತಾದ ಹಲವು ಹಾಲಿವುಡ್ ಸಿನಿಮಾ ಗಳಲ್ಲಿ ಇದೇ ಕಥಾಹಂದರ. AI ಮಾನವನ ವಿರುದ್ಧವೇ ತಿರುಗಿ ಬಿದ್ದು ಸಂಚು ಹೂಡುವ ಕಥೆಗಳು ನಿಜವಾಗುವ ಭೀತಿ ಹಲವು ವಿಜ್ಞಾನಿಗಳಲ್ಲಿ ಇದೆ!
ಹಾಗಿದ್ದರೆ AI ಮಾನವ ಕುಲಕ್ಕೆ ಸಂಭವಿಸಬಹುದಾದ ಅತ್ಯಂತ ಅನುಕೂಲಕರ ಪ್ರಕ್ರಿಯೆಯೋ ಅಥವಾ ವಿನಾಶಕಾರಿ ಪ್ರಕ್ರಿಯೆಯೋ? ವರವೋ? ಶಾಪವೋ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಆದರೆ ಆ ಕಾಲ ನಮ್ಮ ಕೈಯಲ್ಲಿದೆ ಅನ್ನುವುದನ್ನು ಅರಿತುಕೊಂಡಾಗಲೇ ಭವಿಷ್ಯದ ಬಗೆಗೆ ಆಶಾದಾಯಕ ಕನಸನ್ನು ಕಾಣಲು ಸಾಧ್ಯ. ಇಂದು AI ನಮ್ಮ ದೈನಂದಿನ ಚಟುವಟಿಕೆಗಳಿಕೆ ಒಂದು ಹೆಚ್ಚುವರಿ ಸಾಧನವಷ್ಟೇ ಆಗಿದ್ದರೂ, ಮುಂದೆ ಪ್ರಕೃತಿಯ ಆಳವಾದ ಅರಿವನ್ನು ಸಂಪಾದಿಸಲು, ಮನುಜ ಕುಲಕ್ಕೆ ಎದುರಾಗಬಹುದಾದ, ಕಂಡು ಕೇಳರಿಯದ ಅನೇಕ ಸಮಸ್ಯೆಗಳನ್ನು ಎದುರಿಸಲು AIನ ಸಹಾಯದಿಂದ ಮಾತ್ರ ಸಾಧ್ಯ. ನಮ್ಮ ಸುತ್ತಲಿನ ಪ್ರಕೃತಿಯನ್ನು ಆಳವಾಗಿ ಅರಿಯುತ್ತಾ ಹೋದಂತೆ ಜ್ಞಾನ ಹುಟ್ಟಿಕೊಳ್ಳುತ್ತದೆ. ಜ್ಞಾನ ತಂತ್ರಜ್ಞಾನವಾಗಿ ಬದಲಾಗುತ್ತದೆ. ತಂತ್ರಜ್ಞಾನದಿಂದ ನಾಗರೀಕತೆ ಬೆಳೆಯುತ್ತದೆ. ನಾಗರೀಕತೆ ಬೆಳೆದರೆ ಮಾತ್ರ, ಮನುಜ ಕುಲ ಉಳಿಯುತ್ತದೆ, ಬೆಳೆಯುತ್ತದೆ. ಹಾಗಾಗಿ AIನ ಕಾರ್ಯಾಚರಣೆ ಮನುಜ ಕುಲದ ಪ್ರಗತಿಯ ಪಥದಲ್ಲೇ ಸಾಗುವುದನ್ನು ಧ್ರಿಡೀಕರಿಸಿ, ಎದುರಾಗಬಹುದಾದ ಆಪತ್ತುಗಳನ್ನು ಅರಿತು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವತ್ತ ವಿಜ್ಞಾನಿಗಳ ಅನ್ವೇಷಣೆ ಸಾಗಬೇಕು. ಇದನ್ನು ಸಾಧಿಸಲು ಬಹಳಷ್ಟು ಪ್ರತಿಭಾನ್ವಿತ ವಿಜ್ಞಾನಿಗಳು ಹುಟ್ಟಿಕೊಳ್ಳಬೇಕು. ಇಂದಿನ ಯುವಜನತೆಯ ಆಸಕ್ತಿಯನ್ನು ಈ ದಿಕ್ಕಿನಲ್ಲಿ ಹರಿಯಬಿಡುವ ಮಹತ್ತರ ಕೆಲಸ, ಮನೆಯಿಂದ, ಶಾಲೆಯಿಂದ, ಸಮಾಜದಿಂದ ನಡೆಯಬೇಕು. ಸರ್ಕಾರೀ ಮತ್ತು ಖಾಸಗೀ ವಲಯಗಳು ಇಂತಹ ಸಂಶೋಧನೆಗೆ ಪ್ರಾಶಸ್ತ್ಯ ಕೊಟ್ಟು, ಹೂಡಿಕೆಗಳನ್ನು ಮಾಡಬೇಕು. ಪ್ರಸ್ತುತ ಜಾಗತಿಕ ಜನಜೀವನಕ್ಕೆ AI ಒಂದು ಬಹುದೊಡ್ಡ ಬದಲಾವಣೆಯ ಬಿರುಗಾಳಿಯಾಗಿರಬಹುದು, ಆದರೆ ಬದಲಾವಣೆ ಜಗದ ನಿಯಮ. ಇಂದು AI ಯನ್ನು ಸೃಷ್ಟಿಸುವ ಅರಿವನ್ನು ಬೆಳೆಸಿಕೊಂಡ ಮಾನವ ಭವಿಷ್ಯದಲ್ಲಿ ಅದರಿಂದ ಉಂಟಾಗಬಹುದಾದ ಆಪತ್ತನ್ನು ಮುಂಚಿತವಾಗಿಯೇ ಅರಿಯುವ ವಿವೇಕವನ್ನೂ ಬೆಳೆಸಿಕೊಳ್ಳಬೇಕು. ಬದಲಾವಣೆಗೆ ನಾವು ಸಿದ್ಧರಾಗಬೇಕು. ಆದಿಮಾನವ ಮೊಟ್ಟ ಮೊದಲು ಬೆಂಕಿಯನ್ನು ಕಂಡುಹಿಡಿದಾಗ, ಅದರಿಂದ ಉಂಟಾಗಬಹುದಾದ ಅಳಿವಿನ ಅರಿವಿಲ್ಲದೆ, ಹಲವು ಅನಾಹುತಗಳ ಅನುಭವದ ನಂತರ ಅಗ್ನಿಶಾಮಕವನ್ನು ಕಂಡುಕೊಂಡ. ಹಾಗೆಯೇ ಪ್ರತಿಯೊಂದು ಶಕ್ತಿಯುತ ತಂತ್ರಜ್ಞಾನವನ್ನು ಸೃಷ್ಟಿಸಿದ ನಾವು ಅವುಗಳನ್ನು ನಮಗೆ ಪೂರಕವಾಗಿ ಬಳಸಿಕೊಳ್ಳುವ ಹಾಗೂ ಮಾರ್ಪಡಿಸಿಕೊಳ್ಳುವ ಜ್ಞಾನವನ್ನೂ, ವಿವೇಕವನ್ನೂ, ಜವಾಬ್ದಾರಿಯನ್ನೂ ಬೆಳಿಸಿಕೊಳ್ಳಬೇಕು. ಮಾನವ ಬದಲಾವಣೆಗೆ ಕುಗ್ಗದವನು. ನಾವೇ ಬದಲಾಯಿಸುವ ಭವಿಷ್ಯದ ಬಗೆಗೆ ಭಯವೇಕೆ…?
ಬರಹ
ಡಾ. ರಂಜಿತ್ ಕುಮಾರ್ ರವಿಚಂದ್ರನ್
ಭೌತ ವಿಜ್ಞಾನ ಸಂಶೋಧಕ