ನನಗೂ‌ ಡಿಕೆಶಿಗೂ ಯಾವುದೇ ವ್ಯವಹಾರಿಕ ಸಂಬಂಧವಿಲ್ಲ ಅಡ್ಡಮತದಾನದ ಸತ್ಯಾಸತ್ಯತೆ ಕಾಲವೇ ಹೊರತರುತ್ತದೆ. ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪತ್ರಿಕಾಗೋಷ್ಠಿ:

 

 

 

 

ಬೆಳ್ತಂಗಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜೂ 26 ರಂದು  ಧರ್ಮಸ್ಥಳಕ್ಕೆ ಭೇಟಿ ನೀಡಿ  ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.  ಬಳಿಕ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡಮತದಾನದ ಹಿಂದೆ ತಾವು ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯ ಸಂಬಂಧವಿದೆ ಎಂಬ ಆರೋಪವನ್ನು ವಿಜಯೇಂದ್ರ ತಳ್ಳಿಹಾಕಿದರು.

 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪತ್ರಿಕಾಗೋಷ್ಠಿ:

 

 

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಅಲ್ಲಿಂದ ಮಂಗಳೂರಿಗೆ ಆಗಮಿಸಿ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದಿದ್ದೇನೆ. ‌ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಅಡ್ಡಮತದಾನದಿಂದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ನನಗೂ ಮಾನಸಿಕವಾಗಿ ನೋವಾಗಿದೆ. ಧರ್ಮಸ್ಥಳದಲ್ಲಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಭಾವನಾತ್ಮಕವಾಗಿ ಹೇಳಿದ್ದೆ. ಆದರೆ ಪಕ್ಷದ ಹಿರಿಯರು ಆ ಹಂತಕ್ಕೆ ಹೋಗುವುದು ಬೇಡ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ವಿಚಾರವನ್ನು ಮುಂದುವರಿಸಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ರಾಜ್ಯಾಧ್ಯಕ್ಷನ ಜವಾಬ್ದಾರಿ ಸಿಕ್ಕಿದ್ದು, ಪಕ್ಷಕ್ಕೆ ದ್ರೋಹ ಮಾಡುವ ಅಥವಾ ಕೀಳುಮಟ್ಟದ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ವಿವಿಧ ಹೆಸರುಗಳನ್ನು ತೇಲಿಬಿಟ್ಟು ಬಿಜೆಪಿ ಶಾಸಕರ ಬಗ್ಗೆ ಅನುಮಾನ ಮೂಡಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೊಳಗೂ ಅನುಮಾನದ ವಾತಾವರಣ ನಿರ್ಮಾಣವಾಗಿರುವುದು ನಿಜ. ಆದರೆ ಸತ್ಯ ಇಂದು ಅಲ್ಲದಿದ್ದರೂ ನಾಳೆ ಹೊರಬರುತ್ತದೆ. ಕೇಂದ್ರ ನಾಯಕತ್ವಕ್ಕೂ ಎಲ್ಲ ಮಾಹಿತಿ ಇದೆ. ನನಗೆ ಯಾವುದೇ ತನಿಖಾ ವರದಿ ಬಂದಿಲ್ಲ ಎಂದು ತಿಳಿಸಿದರು.

ಎಸ್.ಟಿ. ಸೋಮಶೇಖರ್ ಸೇರಿದಂತೆ ಕೆಲ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯಿದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಚುನಾವಣೆಗೆ ಮೊದಲೇ ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್‌ನವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಉತ್ತಮ ಉದ್ದೇಶದಿಂದ ನೀಡಿದ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ಆರೋಪಗಳಿಗೆ ನಾನು ಹೆಚ್ಚಿನ ಮಹತ್ವ ನೀಡುವುದಿಲ್ಲ. ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬಲಾಗುವುದು. ಕಾರ್ಯಕರ್ತರ ಶಕ್ತಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಜನವಿರೋಧಿ ಹಾಗೂ ರೈತವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಜನರ ಬೆಂಬಲದೊಂದಿಗೆ ಅಧಿಕಾರದಿಂದ ಕೆಳಗಿಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಬಿಡದಿ ಭೂಸ್ವಾಧೀನ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಮತದಾರರ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರ್ಪಡೆ ಪ್ರಕರಣದಲ್ಲೂ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಬಿಜೆಪಿ ಕಾರ್ಯಕರ್ತರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

“ನಾನು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ಭಕ್ತನಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಸಮಯ ಬಂದಾಗ ಎಲ್ಲ ಸತ್ಯವೂ ಹೊರಬರುತ್ತದೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ” ಎಂದು ವಿಜಯೇಂದ್ರ ಹೇಳಿದರು. ಈ ಸಂದರ್ಭದಲ್ಲಿಸಂಸರದ ಬ್ರಿಜೇಶ್ ಚೌಟ, ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಗುರುರಾಜ ಗಂಟಿಹೊಳೆ, ಯಶಪಾಲ್ ಸುವರ್ಣ, ರಾಜೇಶ್ ನಾಯಕ್, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಕೆ. ಪ್ರತಾಪಸಿಂಹನಾಯಕ್, ಕಿಶೋರ್ ಕುಮಾರ್ ಮತ್ತು ಪಕ್ಷದ ಪ್ರಮುಖರಾದ ಜಯಂತ್ ಕೋಟ್ಯಾನ್ ಹಾಗೂ ಶ್ರೀನಿವಾಸ ರಾವ್ ಧರ್ಮಸ್ಥಳ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.

error: Content is protected !!