ಹೆದ್ದಾರಿ ದಾಟಲು ಹರಸಾಹಸ ಪಡಬೇಕಾಗಿದೆ ಶಾಲಾ ವಿದ್ಯಾರ್ಥಿಗಳು: ವಾಹನಗಳ ಅತೀ ವೇಗದ ಸಂಚಾರ, ಪೋಷಕರಿಗೆ ಮಕ್ಕಳ ಸುರಕ್ಷತೆಯ ಆತಂಕ:ಅನಾಹುತ ಸಂಭವಿಸುವ ಮೊದಲು ನಿರ್ಮಾಣವಾಗಬೇಕಿದೆ ಓವರ್ ಬ್ರಿಡ್ಜ್‌ :

 

 

 

ಬೆಳ್ತಂಗಡಿ: ಮಂಗಳೂರು ವಿಲ್ಲುಂಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಸ್ತೆಯು ಅಗಲೀಕರಣಗೊಂಡು ಅಭಿವೃದ್ಧಿ ಗೊಳ್ಳುತ್ತಿರುವುದು ಒಂದು ಕಡೆಯಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಸಂತೋಷವನ್ನುಂಟು ಮಾಡಿದರೆ ಇನ್ನೊಂದೆಡೆ ಹೆದ್ದಾರಿ ಬದಿಯಲ್ಲಿ ಇರುವ ಶಾಲೆಯ ಮಕ್ಕಳಿಗೆ ರಸ್ತೆ ದಾಟುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಾರ್ಮಾಡಿಯಿಂದ ಪುಂಜಾಲಕಟ್ಟೆಯವರೆಗೆ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ಗಳಿಂದ ಇಳಿದು ರಸ್ತೆ ದಾಟಬೇಕಾಗುತ್ತದೆ.ಅದರೆ ರಸ್ತೆ ದಾಟುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ , ಈಗಾಗಲೇ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ವಿಪರೀತ ಹೆಚ್ಚಾಗಿದ್ದು ಅತೀ ವೇಗವಾಗಿ ಚಲಿಸುವ ವಾಹನಗಳು ಅದರಲ್ಲೂ ಓವರ್ ಸ್ಪೀಡ್ ನಲ್ಲಿ ಅಜಾಗರೂಕತೆಯಿಂದ ಚಲಿಸುವ ದ್ವಿಚಕ್ರ ವಾಹನಗಳು, ಇದರಿಂದಾಗಿ ಚಿಕ್ಕಪುಟ್ಟ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ಜೀವ ಭಯದಲ್ಲಿ ರಸ್ತೆ ದಾಟಿ ಶಾಲೆಗೆ ಹೋಗಬೇಕಾದ ಅನೀವಾರ್ಯ ಸ್ಥಿತಿ ಇದೆ. ಅದರಲ್ಲೂ ಸರ್ವಿಸ್ ರಸ್ತೆಗಳಿರುವಲ್ಲಿ ಒಂದು ಕಡೆಯಿಂದ ಇನ್ನೊಂದು ಬದಿಗೆ ರಸ್ತೆ ದಾಟುವುದು ಮತ್ತಷ್ಟು ಕಷ್ಟಕರ ಎನಿಸಲಿದೆ. ಈಗಾಗಲೇ ಪೋಷಕರು ಸೇರಿದಂತೆ ಶಾಲಾ ಆಡಳಿತ ಮಂಡಳಿ ಮಕ್ಕಳ ಸುರಕ್ಷತೆ ಬಗ್ಗೆ ಚಿಂತಿತರಾಗಿದ್ದಾರೆ.
ಬೆಳ್ತಂಗಡಿ ವಾಣಿ ಶಾಲೆಯ ಬಳಿ ಓವರ್ ಬ್ರಿಡ್ಜ್ ನಿರ್ಮಾಣ ಮಾಡಿಕೊಡುವಂತೆ ಶಾಲಾ ಆಡಳಿತ ಮಂಡಳಿ ಈಗಾಗಲೇ  ಮನವಿ ಸಲ್ಲಿಸಿದೆ. ಅದೇ ರೀತಿ ಹೆಚ್ಚು ಮಕ್ಕಳಿರುವ ಬೆಳ್ತಂಗಡಿ ಚರ್ಚ್ ರಸ್ತೆ, ಉಜಿರೆ ಅನುಗ್ರಹ ಶಾಲೆ ಬಳಿ, ಸೋಮಂತಡ್ಕ ಸೇರಿದಂತೆ ಅವಶ್ಯಕತೆ ಇರುವಲ್ಲಿ  ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ  ಓವರ್ ಬ್ರಿಡ್ಜ್ ನಿರ್ಮಾಣದ ಅಗತ್ಯತೆ ಇದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೂಂಡು ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

error: Content is protected !!