
ಬೆಳ್ತಂಗಡಿ :ಸೇವಾ ಕಾರ್ಯ ಮನುಷ್ಯನ ಮನುಷ್ಯತ್ವದ ಮುಖ್ಯ ಕಾರ್ಯ.ಜೀವನದಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ನಮ್ಮಿಂದ ಸಾಧ್ಯವಾಗುವುದನ್ನು ಸಮಾಜಕ್ಕೆ ಅರ್ಪಿಸುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ಹೇಳಿದರು.ಅವರು ಬೆಳ್ತಂಗಡಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್, ಬೆಳ್ತಂಗಡಿ ವರ್ತಕರ ಸಂಘ, ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಮತ್ತು ಸ್ವಸಹಾಯ ಸಂಘ ನಿಯಮಿತ ಇವುಗಳ ಸಂಯುಕ್ತ ಆಶ್ರಯದಲ್ಲಿ ಟೀಮ್ ಈಶ್ವರ ಮಲ್ಪೆ ಇವರ ಸಹಯೋಗದೊಂದಿಗೆ ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಮೇ 07 ಭಾನುವಾರ ನಡೆದ ಕಿವಿಯ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೋ ರೀತಿಯಲ್ಲಿ ಹತ್ತಾರು ಮಂದಿಗೆ ಪ್ರಯೋಜನವಾಗುವ ಕೆಲಸವನ್ನು ಮಾಡಿದಾಗ ಮನುಷ್ಯನಾಗಿ ಬದುಕಿ ಬಾಳಿದ್ದಕ್ಕೆ ಸಾರ್ಥಕ್ಯ ಸಿಗುವುದು’ ಎಂದರು.
ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜಾ ಮಾತನಾಡಿ, ಪ್ರತಿಯೊಬ್ಬರೂ ಕಷ್ಟದ ಜತೆ ಬದುಕನ್ನು ಕಂಡುಕೊಂಡವರು. ನಮ್ಮ ದುಡಿಮೆಯಿಂದ ಬರುವ ಲಾಭದ ಕಿಂಚಿತ್ತು ಪಾಲನ್ನಾದರೂ ಸಮಾಜಕ್ಕೆ ಅರ್ಪಿಸುವುದೇ ನಿಜವಾದ ಸೇವೆ. ಕಿವಿಯ ಶ್ರವಣ ಸಮಸ್ಯೆಯ ಮಧ್ಯೆ ಬಳಲುವ ತಾಲ್ಲೂಕಿನ ಅದೆಷ್ಟೋ ಜನರಿಗೆ ಇಂತಹ ಶಿಬಿರಗಳು ಬದುಕಿನ ಹೊಸ ಆಶಾಭಾವನೆ ಮೂಡಿಸಲು ಸಾಧ್ಯ’ ಎಂದರು.
ಟೀಮ್ ಈಶ್ವರ ಮಲ್ಪೆ ಸಂಚಾಲಕ ಲವ ಬಂಗೇರ ಮಾತನಾಡಿ, ‘ ಕಿವಿಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆಗುವ ಶಿಬಿರಗಳು ಅತ್ಯಂತ ಕಡಿಮೆ. ಆದರೆ ಟೀಮ್ ಈಶ್ವರ ಮಲ್ಪೆ ವತಿಯಿಂದ ವ್ಯಕ್ತಿಯೋರ್ವ ಮನುಷ್ಯನಾಗಿ ಸಮಾಜದಲ್ಲಿ ಚೆನ್ನಾಗಿ ಬಾಳಿ ಬದುಕಲು ಇಂತಹ ಶಿಬಿರಗಳನ್ನು ಮಾಡುತ್ತಾ ಬರುತ್ತಿದ್ದು, ಈಗಾಗಲೇ 20 ತಿಂಗಳಲ್ಲಿ 120 ಶಿಬಿರಗಳನ್ನು ಹಮ್ಮಿಕೊಂಡು ನೂರಾರು ಜನರಿಗೆ ಬದುಕಿನ ಹೊಸ ದಿಕ್ಕನ್ನು ತೋರಿಸಿದ್ದೇವೆ’ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಮತ್ತು ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಲ್ಯಾನ್ಸಿ ಪಿರೇರಾ, ಬೆಳ್ತಂಗಡಿ ವರ್ತಕರ ಸಂಘದ ಉಪಾಧ್ಯಕ್ಷ ಶಶಿಧರ ಪೈ, ಶ್ರವಣ ತಜ್ಞ ಡಾ. ಮೋಹಿತ್ ಮಂಗಳೂರು ಇದ್ದರು.
11 ಮಂದಿಗೆ ಶ್ರವಣ ಯಂತ್ರಕ್ಕೆ ಸಹಾಯಧನ ನೀಡಲಾಯಿತು
ಬೆಳ್ತಂಗಡಿ ಪ್ರೆಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಸ್ವಾಗತಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಬಳಂಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.