
ದೆಹಲಿ: ಜಾಗತಿಕ ಇಂಧನ ವೆಚ್ಚದಲ್ಲಿ ಏರಿಕೆ ಹಿನ್ನೆಲೆಯಲ್ಲಿ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರದಲ್ಲಿ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ದರ ಏರಿಕೆಯಾಗಿದೆ.
ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಜೂನ್ 7ರಿಂದ ಜಾರಿಗೆ ಬರುವಂತೆ 913 ರೂ.ಗಳಿಂದ 942 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಜಾಗತಿಕ ಇಂಧನ ಪೂರೈಕೆಗೆ ವ್ಯತ್ಯಯ ಉಂಟು ಮಾಡಿದ ಬಳಿಕ ಹಾಗೂ ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿ ಏರಿಕೆಯಾದ ಬೆನ್ನಲ್ಲೇ ಮಾರ್ಚ್ 7ರಂದು ಸಿಲಿಂಡರ್‌ಗೆ 60 ರೂ.ಗಳಷ್ಟು ಹೆಚ್ಚಳ ಮಾಡಲಾಗಿತ್ತು.
ದೇಶೀಯ ಎಲ್‌ಪಿಜಿ ಮಾರಾಟದ ಮೇಲಿನ ನಷ್ಟವನ್ನು ಈ ಹೆಚ್ಚಳವು ಭಾಗಶಃ ಸರಿದೂಗಿಸಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಇತ್ತೀಚೆಗೆ, ಜೂನ್ 01ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯು ದೆಹಲಿಯಲ್ಲಿ 42 ರೂ.ಗಳಷ್ಟು ಮತ್ತು ಕೋಲ್ಕತ್ತಾದಲ್ಲಿ 53.50 ರೂ.ಗಳಷ್ಟು ಏರಿಕೆಯಾಗಿತ್ತು.
ಇತ್ತೀಚಿನ ಪರಿಷ್ಕರಣೆಯ ಮೊದಲು ಮಾರಾಟವಾಗುವ ಪ್ರತಿ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 703 ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂಧನ ಬೆಲೆ ಹೆಚ್ಚಳದ ಮಧ್ಯೆ ಮತ್ತೆ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ.