
ಬೆಂಗಳೂರು: ನಡ ಗ್ರಾಮದ ಮಲೆಯಡ್ಕ ಎಂಬಲ್ಲಿ ಮುಗ್ರೋಡಿ ಕನ್ ಸ್ಟ್ರಕ್ಷನ್ ಹಾಟ್ ಮಿಕ್ಸ್ ನಡೆಸುತ್ತಿರುವ ಹಾಟ್ ಮಿಕ್ಸ್ ಘಟಕವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ವ್ಯಾಪಕ ಪ್ರಮಾಣದಲ್ಲಿ ಧೂಳು, ಕಲುಷಿತ ಹೊಗೆ, ರಾಸಾಯನಿಕ ವಿಷಯುಕ್ತ ನೀರನ್ನು ನಡ ಗ್ರಾಮ ಮತ್ತು ಉಜಿರೆ ಗ್ರಾಮದ ಬೈಲು ಪ್ರದೇಶಗಳಿಗೆ ಹರಿಬಿಟ್ಟು ಕಾರ್ಖಾನೆ ವ್ಯಾಪಕ ಪ್ರಮಾಣದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಉಸಿರುಗಟ್ಟುವ ವಾತಾವರಣ, ಅಕ್ರಮ ಕಂದಾಯ ಮತ್ತು ಅರಣ್ಯ ಭೂ ಒತ್ತುವರಿ, ಕುಡಿಯಲು ಅನರ್ಹವಾದ ನೀರಿನ ರಿಪೋರ್ಟುಗಳನ್ನು ಮಾಹಿತಿ ಹಕ್ಕಿನಡಿ ಕಲೆಹಾಕಿದ ಮಲೆಯಡ್ಕ ಮತ್ತು ಆಸುಪಾಸಿನ ಅತ್ತಾಜೆ, ಕೋಡಿಜಾಲು, ಸುರ್ಯ, ಪಂಜೋಲಿಮಾರ್, ಇಜ್ಜಲ ನಿವಾಸಿಗಳು ಅನಧಿಕೃತತೆಯ ವಿರುದ್ದ ರಾಜ್ಯ ಉಚ್ಚ ನ್ಯಾಯಾಲಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಿಲ್ಲಾಧಿಕಾರಿ, ತಾಲೂಕು ಆಡಳಿತ, ತಹಶೀಲ್ದಾರ್, ಉಭಯ ಗ್ರಾಮ ಪಂಚಾಯತ್ ಸಹಿತವಾಗಿ ಅರಣ್ಯ ಇಲಾಖೆ, ಕಂದಾಯ ಇಲಾಖೆಗಳಿಗೂ ಗ್ರಾಮಸ್ಥರು ದೂರು ಕೂಡ ನೀಡಿದ್ದರು.
ಅಧಿಕಾರಿಗಳ ವರ್ಷಗಟ್ಟಲೆ ಮೌನದ ತರುವಾಯ ಸಿಡಿದೆದ್ದ ಸಂತ್ರಸ್ತರು ‘ಗುಮ್ಮಟೆ ಚಳುವಳಿ’ ಹಮ್ಮಿಕೊಂಡು ಬುಡಕಟ್ಟು ಚರ್ಮವಾದ್ಯದ ಮೂಲಕ ಬೃಹತ್ ಚಳುವಳಿ ಹಮ್ಮಿಕೊಂಡು ಪ್ರತಿಭಟಿಸಿದ್ದರು. ಕೇಂದ್ರ ಸರ್ಕಾರದ ಬುಡಕಟ್ಟು ಆಯೋಗ, ಪ್ರಧಾನಮಂತ್ರಿ ಕಾರ್ಯಾಲಯ, ಹಸಿರುಪ್ರಾಧಿಕಾರಗಳಿಗೆ ವ್ಯಾಪಕ ಪ್ರಮಾಣದಲ್ಲಿ ಪತ್ರ ಮತ್ತು ಈ ಮೇಲ್ ಚಳುವಳಿ ನಡೆದ ನಂತರ ರಾಷ್ಟ್ರ್ ಬುಡಕಟ್ಟು ಆಯೋಗ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಿರ್ದೇಶನ ನೀಡಿ ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕರಣ ಕೈಗೆತ್ತಿಕೊಂಡು ಕಾರ್ಖಾನೆಯ ಹಲವಾರು ಅನಧಿಕೃತತೆಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸಿತು. ಮಂಡಳಿಯ ತನಿಖಾ ತಂಡ ಸ್ಥಳದಲ್ಲಿ 24 ಗಂಟೆ ಮೊಕ್ಕಾಂ ಹೂಡಿ ವ್ಯಾಪಕ ಪ್ರಮಾಣದಲ್ಲಿ ಪ್ರಾಕೃತಿಕ ಅಸಮತೋಲನ ಘಟಿಸಿರುವುದನ್ನು ಶೃತಪಡಿಸಿತು.
ಚಿಮಿಣಿಗಳ ಅಸಮರ್ಪಕ ಎತ್ತರ, ಇಡೀ ವಾತಾವರಣ ಧೂಳುಮಯವಾದುದು, ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಗ್ರೀನ್ ಬೆಲ್ಟ್ ಅಳವಡಿಕೆಯ ವೈಫಲ್ಯ, ಮಾಲಿನ್ಯದ ತೀವ್ರತೆಗಳನ್ನು ಯಥಾವತ್ತು ವರದಿ ಮಾಡಲಾಗಿತ್ತು.
ಈ ಸಂಬಂಧ ಕಾರ್ಖಾನೆಯನ್ನು ಮುಚ್ಚುವ ಎಚ್ಚರಿಕೆಯೊಂದಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯ ಪ್ರವೃತ್ತವಾಗಿದ್ದು ಇತ್ತೀಚೆಗೆ ಬೆಂಗಳೂರಿನಲ್ಲಿ ಎರಡೂ ಕಡೆ ಪ್ರತಿವಾದಿಗಳನ್ನು ಕರೆಸಿ ಮುಗ್ರೋಡಿ ಕನ್ ಸ್ಟ್ರಕ್ಷನ್ ಅನಧಿಕೃತತೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ತೀರ್ಮಾನಕ್ಕೆ ಸಂತ್ರಸ್ತರು, ಮಲೆಯಡ್ಕ ಉಳಿಸಿ ಬುಡಕಟ್ಟು ರಕ್ಷಿಸಿ ಹೋರಾಟ ಸಮಿತಿ ಹರ್ಷ ವ್ಯಕ್ತಪಡಿಸಿದೆ.
ಲೋಕಾಯುಕ್ತ ಹೋರಾಟದ ಎಚ್ಚರಿಕೆ: ಮಾಲಿನ್ಯ ನಿಯಂತ್ರಣ ಮಂಡಳಿಯ ಈ ನಿಲುವಿನಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಹೋರಾಟ ಸಮಿತಿ ಅನಧಿಕೃತವಾಗಿ ಲೈಸೆನ್ಸ್, ಅಕ್ರಮಗಳಿಗೆ ಕಾರಣವಾದ ವಿವಿಧ ಅಧಿಕಾರಿಗಳ ವಿರುದ್ದ, ಇನ್ನೂ ಕ್ರಮಜರುಗಿಸಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ದ ಲೋಕಾಯುಕ್ತ, ಜಾರಿ ನಿರ್ದೇಶನಾಲಯ, ಮತ್ತು ಆದಾಯ ತೆರಿಗೆ ಇಲಾಖೆಗಳಿಗೆ ದೂರು ನೀಡುವ ಕುರಿತಾಗಿ ತೀರ್ಮಾನ ಕೈಗೊಂಡಿದೆ.