
ದೆಹಲಿ: ನಿರೀಕ್ಷೆಯಂತೆಯೇ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸೌಹಾರ್ದ ಮತ್ತು ಗೌರವಯುತವಾಗಿ ಪಕ್ಷದಿಂದ ದೂರ ಸರಿಯಲು ಬಯಸುವುದಾಗಿ ಹೇಳಿದ್ದ ಅವರು, 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನು ರಾಷ್ಟ್ರಾಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಅಮಿತ್ ಶಾ ಜೊತೆಗೂ ಚರ್ಚೆ: ಅಧ್ಯಕ್ಷ ನಿತಿನ್ ನಬಿನ್ ಅವರೊಂದಿಗಿನ ಭೇಟಿಯ ನಂತರ, ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಅವರನ್ನೂ ಭೇಟಿ ಮಾಡಿ ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದಾರೆ. ಇದಾದ ಬಳಿಕ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಹ ಭೇಟಿ ಮಾಡಿ ಚರ್ಚಿಸಿದ್ದಾರೆ.
ರಾಜೀನಾಮೆ ಸುಳಿವು ನೀಡಿದ್ದ ಅಣ್ಣಾಮಲೈ:
ಅಣ್ಣಾಮಲೈ ಅವರು ಬಿಜೆಪಿ ತೊರೆಯುವ ಬಗ್ಗೆ ಎರಡು ದಿನಗಳ ಹಿಂದಷ್ಟೇ ಸುಳಿವು ನೀಡಿದ್ದರು. ದೆಹಲಿಗೆ ಆಗಮಿಸುವ ವೇಳೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ಎರಡು ದಿನಗಳ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದರು. ಇದು ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆಯೂ ಸುಳಿವು ನೀಡಿದಂತಿತ್ತು.
ಬಿಜೆಪಿ ಜೊತೆಗೆ ಬಿರುಕಿಗೆ ಕಾರಣವೇನು?:
ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಕೆಲ ದಿನಗಳಿಂದ ಪಕ್ಷದ ಜೊತೆಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. 2019ರ ವಿಧಾನಸಭೆ ಚುನಾವಣೆಯ ವೇಳೆ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾದರೆ ಅಣ್ಣಾಮಲೈರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಎಐಎಡಿಎಂಕೆ ಕರಾರು ಹಾಕಿತ್ತು. ಅದರಂತೆ ಪಕ್ಷದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇದು ಅಣ್ಣಾಮಲೈಗೆ ಬಿಜೆಪಿ ನೀಡಿದ ಮೊದಲ ಶಾಕ್ ಆಗಿತ್ತು.
ಅದಾದ ಬಳಿಕ, 2026ರ ವಿಧಾನಸಭೆ ಚುನಾವಣೆ ವೇಳೆಯೂ ಎಐಎಡಿಎಂಕೆ ಜೊತೆಗೆ ಮೈತ್ರಿ ಬೇಡ ಎಂಬುದು ಅಣ್ಣಾಮಲೈ ಅಭಿಪ್ರಾಯವಾಗಿತ್ತು. ಆದರೆ, ಪಕ್ಷದ ಹೈಕಮಾಂಡ್ ಮತ್ತೆ ದ್ರಾವಿಡ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಇದು ಅಣ್ಣಾಮಲೈ ಅವರು ಪಕ್ಷದಿಂದ ದೂರಾಗಲು ಪ್ರಮುಖ ಕಾರಣವಾಯಿತು. ಇದರಿಂದ ಮುನಿಸಿಕೊಂಡಿದ್ದ ಅವರು, ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು.
ತ್ರಿಭಾಷಾ ಸೂತ್ರ ವಿರೋಧಿಸಿದ್ದ ಅಣ್ಣಾಮಲೈ:
ಪ್ರಸಕ್ತ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು ಜಾರಿಗೊಳಿಸುವ ಕುರಿತು ಸಿಬಿಎಸ್‌ಇ ಹೊರಡಿಸಿದ್ದ ಪ್ರಕಟಣೆಯನ್ನು ಅಣ್ಣಾಮಲೈ ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೇ ಈ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಇದು ಅವರು ಬಿಜೆಪಿ ಬಿಡುವ ಸ್ಪಷ್ಟ ಸೂಚನೆ ನೀಡಿತ್ತು.
ಅಣ್ಣಾಮಲೈ ಅವರು ಜೂನ್ 04 ರ ತಮ್ಮ ಜನ್ಮದಿನದಂದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಬಹುದು ಘೋಷಿಸಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಈ ವಿಚಾರವೀಗ ತಮಿಳುನಾಡಿನಾದ್ಯಂತ ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ.