ಗುರುವಾಯನಕೆರೆ-ಉಪ್ಪಿನಂಗಡಿ ಹೆದ್ದಾರಿ ಅಭಿವೃದ್ಧಿಗೆ ಸಚಿವ ಸಂಪುಟ ಅನುಮೋದನೆ:

 

 

ಮಂಗಳೂರು: ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ರೂ. ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯು ಗುಡ್ಡ, ಇಳಿಜಾರು ಮತ್ತು ತಿರುವ ಹೊಂದಿರುವ ರಸ್ತೆಯಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಕ್ಕೆ ಹಾಗೂ ಧರ್ಮಸ್ಥಳ, ವೇಣೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ.

ಈಗಾಗಲೇ , ಆಯ್ದ ಭಾಗಗಳಲ್ಲಿ ತಡೆಗೋಡೆ, ಆರ್‌ಸಿಸಿ ಚರಂಡಿ ನಿರ್ಮಾಣ, ಭೂಸ್ವಾಧೀನ ವೆಚ್ಚಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸಚಿವ ಸಂಪುಟವು 13 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.
ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಧೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಈಗಾಗಲೇ ಗುರುವಾಯನಕೆರೆ  ಪಿಲಿಗೂಡು ವರೆಗೆ ಸಂಸದರ ನಿಧಿ ಬಳಸಿ 6 ಕೋಟಿ ವೆಚ್ಚದಲ್ಲಿ ವರ್ಷದ ಹಿಂದೆ  ರಸ್ತೆ  ಕಾಮಗಾರಿ ನಡೆಸಲಾಗಿದೆ.ಇನ್ನು ಪಿಲಿಗೂಡು ‌- ಉಪ್ಪಿನಂಗಡಿ ವರೆಗೆ  ರಸ್ತೆ ಕಾಮಗಾರಿ ಬಾಕಿ ಇದ್ದು ತಕ್ಷಣ  ಟೆಂಡರ್ ಕರೆದು ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಂಡರಷ್ಟೇ ಸಾರ್ವಜನಿಕರಿಗೆ ವಾಹನ  ಸವಾರರಿಗೆ ಅನುಕೂಲವಾಗಲಿದೆ.

 

ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸರಕಾರದ ಗಮನ ಸೆಳೆದಿದ್ದರು. ಸಾರ್ವಜನಿಕರೊಂದಿಗೆ ಸೇರಿ, ಪ್ರತಿಭಟನೆಯನ್ನು ನಡೆಸಿದ್ದರು. ವಿಧಾನಸಭೆಯಲ್ಲಿ ಕೂಡ ರಸ್ತೆ ವಿಚಾರ ಪ್ರಸ್ತಾಪಿಸಿ, ಸರಕಾರದ ಗಮನ ಸೆಳೆದಿದ್ದರು. ಇದೀಗ, ರಸ್ತೆ ಅಭಿವೃದ್ಧಿಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

 

error: Content is protected !!