
ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣನಾಗಿದ್ದ ಅಪರಾಧಿ ಮೊಹಮ್ಮದ್ ಶಾರೀಕ್ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ 94 ಸಾವಿರ ರೂಪಾಯಿ ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಪ್2022ರ ನ.19ರಂದು ಸಂಜೆ 4:40 ಸುಮಾರಿಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಶಾರೀಕ್ ತೆರಳುವಾಗ (ಐಇಡಿ) ಕುಕ್ಕರ್ ಸ್ಫೋಟಗೊಂಡಿತ್ತು. ಸ್ಫೋಟದ ರಭಸಕ್ಕೆ ಉಗ್ರನ ಜೊತೆ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಅವರು ಸಹ ಗಂಭೀರ ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಂಕಿತನನ್ನು ಬಂಧಿಸಿದ್ದರು.
ಕೃತ್ಯದ ಹಿಂದೆ ಐಸಿಸ್ ನಂಟು ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿ ಎನ್ಐಎ ತನಿಖೆ ಕೈಗೊಂಡಿತ್ತು. ಕೃತ್ಯದ ಕುರಿತು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾ. ಕೆಂಪರಾಜು ಅವರು ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹94 ಸಾವಿರ ದಂಡ ವಿಧಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತನ ವಿರುದ್ಧ 2020ರಲ್ಲಿ ಮಂಗಳೂರಿನ ಗೋಡೆ ಬರಹ ಹಾಗೂ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದ. ವಿಚಾರಣೆ ವೇಳೆ ತಾನು ನಿರಾಪರಾಧಿ ಎಂದು ಹೇಳಿದ್ದ. ಬಳಿಕ 2025ರ ಡಿಸೆಂಬರ್ ನಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ.
ನನ್ನ ವಿರುದ್ಧ ಎನ್ಐಎ ತನಿಖಾಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ನಮೂದಿಸಿರುವ ಆರೋಪಗಳು ಸತ್ಯವಾಗಿದ್ದು, ಕುಕ್ಕರ್ ನಲ್ಲಿ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಇಟ್ಟು ಸ್ಫೋಟಕ್ಕೆ ಕಾರಣನಾಗಿರುವೆ. ನನಗೆ ಈಗ ಪಶ್ಚಾತಾಪವಾಗಿದೆ. ”ಕೃತ್ಯದಲ್ಲಿ ತಾನು ಭಾಗಿಯಾಗಿದ್ದೇನೆ. ತನಗೆ 4 ವರ್ಷದ ಮಗಳಿದ್ದು, ಕುಟುಂಬದಲ್ಲಿ ಡುಡಿಯುವ ವ್ಯಕ್ತಿ ತಾನಾಗಿದ್ದು, ಕಡಿಮೆ ಶಿಕ್ಷೆ ನೀಡುವಂತೆ ಸಿಆರ್ ಪಿಸಿ ಸೆಕ್ಷನ್ 229ರಡಿ ತಪ್ಪೊಪ್ಪಿಗೆ ಅರ್ಜಿಯಲ್ಲಿ ಶಾರೀಕ್ ಮನವಿ ಮಾಡಿದ್ದ. ” ಈತನ ಮನವಿಯನ್ನು ಮಾರ್ಚ್ 26ರಂದು ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ಅಪರಾಧಿಗೆ ಐಪಿಸಿ ಹಾಗೂ ಯುಎಪಿಎ ಕಾಯ್ದೆಗಳ ಸೆಕ್ಷನ್ ನಡಿ 10 ವರ್ಷ ಕಠಿಣ ಸಜೆ ಪ್ರಕಟಿಸಿದೆ. 2022ರಿಂದ ಜೈಲಿನಲ್ಲಿರುವ ಶಾರೀಕ್, ಈಗಾಗಲೇ ಮೂರುವರೆ ವರ್ಷ ಸಜೆ ಅನುಭವಿಸಿದ್ದಾನೆ. ಬಾಕಿ ಏಳೂವರೆ ವರ್ಷ ಜೈಲಿನಲ್ಲಿ ಇರಬೇಕಿದೆ.
ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ದೇವಾಲಯಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದು ಶಂಕಿತರ ಉಗ್ರರ ಹುನ್ನಾರವಾಗಿತ್ತು. ಇದೇ ಭಾಗವಾಗಿ ಕುಕ್ಕರ್ ನಲ್ಲಿ ಇಎಲ್ ಡಿ ಇಟ್ಟು ಟೈಮರ್ ಫಿಕ್ಸ್ ಮಾಡಲಾಗಿತ್ತು. 90 ನಿಮಿಷಗಳ ಫಿಕ್ಸ್ ಮಾಡುವ ಬದಲು 9 ನಿಮಿಷಕ್ಕೆ ತಪ್ಪಾಗಿ ನಿಗದಿಪಡಿಸಿದ್ದರಿಂದ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ಅನ್ನು ಬಾಂಬ್ ತಯಾರಿಕೆಗೆ ಅಗತ್ಯವಾದ ಉಪಕರಣಗಳನ್ನು ಪೂರೈಸಿದ ಆರೋಪದಡಿ ಬಂಧಿಸಲಾಗಿತ್ತು.