ವಕೀಲರ ಸಂಘ ಬೆಳ್ತಂಗಡಿ, ಡಿ 19 ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ:

 

 

ಬೆಳ್ತಂಗಡಿ: ವಕೀಲರ ಸಂಘ ಬೆಳ್ತಂಗಡಿ  ಚುನಾಯಿತ ನೂತನ  ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ. 19ರಂದು ಸಂಜೆ 6 ಗಂಟೆಗೆ ಬೆಳ್ತಂಗಡಿಯ ಹೋಲಿ ರೆಡಿಮರ್ ಚರ್ಚ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್.ಲೋಬೊ ತಿಳಿಸಿದರು.
ಅವರು ಮಂಗಳವಾರ ಬೆಳ್ತಂಗಡಿ ವಕೀಲರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಸರಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಉದ್ಘಾಟಿಸಲಿದ್ದು,ಅಧ್ಯಕ್ಷ ಅಲೋಶಿಯಸ್ ಎಸ್.ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಪ್ರಧಾನ ಜಿಲ್ಲಾ ಸರಕಾರಿ ನ್ಯಾಯವಾದಿ ಮೆಲ್ವಿನ್ ಪ್ರಕಾಶ್ ನೊರೊನ್ಹಾ, ಬೆಳ್ತಂಗಡಿಯ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಬಿ.ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್.,ಶಾಸಕ ಹರೀಶ್ ಪೂಂಜ, ಎಂಎಲ್ ಸಿ ಕೆ.ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಎಂಬಿಬಿಎಸ್ ಪ್ರವೇಶ ಪಡೆದ ವಿದ್ಯಾರ್ಥಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಗುತ್ತದೆ. ಸಂಘದ ನೂತನ ಆಡಳಿತ ಮಂಡಳಿಯ ಮುಂದೆ ಹಲವು ಜವಾಬ್ದಾರಿಗಳಿದ್ದು, ಸುಮಾರು 23 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನೆ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು ಮುಖ್ಯಮಂತ್ರಿಗಳು,ಸಚಿವರು ಆಗಮಿಸಲಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಗಳು, ಜಿಲ್ಲೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಹೋರಾಟ, ಬೆಳ್ತಂಗಡಿಯಲ್ಲಿ ಸತ್ರ ನ್ಯಾಯಾಲಯದ ಪೀಠ ಸ್ಥಾಪನೆಗೆ ಪ್ರಯತ್ನ ನಡೆಸಲಿದ್ದೇವೆ.ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಅವರು ವಕೀಲರ ಭವನದ ಮೇಲಂತಸ್ತಿನಲ್ಲಿ ಇ-ಗ್ರಂಥಾಲಯ, ಚಾವಣಿಯ ಕಾಮಗಾರಿಗಳಿಗೆ 10 ಲಕ್ಷ ರೂ. ಅನುದಾನ ನೀಡಿದ್ದು, ಅದರ ಕಾಮಗಾರಿಗಳು ಶೀಘ್ರ ಆರಂಭವಾಗಲಿದೆ ಎಂದರು.ಸಂಘದ ಪದಾಧಿಕಾರಿಗಳಾದ ಮುಮ್ತಾಜ್ ಬೇಗಂ, ಹರ್ಷಿತ್ ಎಚ್., ಸಂದೀಪ್ ಡಿಸೋಜ, ಉಷಾ ಎನ್.ಜಿ. ಉಪಸ್ಥಿತರಿದ್ದರು.

error: Content is protected !!