
ಬೆಳ್ತಂಗಡಿ: ಉಜಿರೆ ಸಂತ ಅಂತೋನಿ ಚರ್ಚ್ ನವೀಕರಣಗೊಂಡಿದ್ದು ಇದರ ಉದ್ಘಾಟನೆ,ಆಶೀರ್ವಚನ ಹಾಗೂ ಬಲಿಪೂಜೆ ಸಮಾರಂಭ ಡಿ.22ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಚರ್ಚ್ ಧರ್ಮಗುರು ಫಾ.ಅಬೆಲ್ ಲೋಬೊ ತಿಳಿಸಿದರು.
ಅವರು ಮಂಗಳವಾರ ಚರ್ಚ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ
ಕಳೆದ ಕೆಲವು ವರ್ಷಗಳ ಹಿಂದೆ ಚರ್ಚಿನ ಶಿಲುಬೆ ಗೋಪುರ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅದರ ದುರಸ್ತಿಯ ಜತೆಗೆ ಚರ್ಚ್ ಒಳಗೆ ಸ್ಥಳಾವಕಾಶದ ವಿಸ್ತರಣೆಯ ಉದ್ದೇಶದಿಂದ ಕಟ್ಟಡದ ನವೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು.

ಒಟ್ಟು ₹ 1.20 ಕೋಟಿ ವೆಚ್ಚದ ಕಾಮಗಾರಿ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದಾಗ ಅಲ್ಪಸಂಖ್ಯಾಕ ಇಲಾಖೆಯಿಂದ 50 ಲಕ್ಷ ರೂ.ಮಂಜೂರಾಗಿ ಈಗಾಗಲೇ 25 ಲಕ್ಷ ರೂ. ಅನುದಾನ ವಿನಿಯೋಗಿಸಲಾಗಿದೆ. ಮುಂದೆ ಕಾಮಗಾರಿ ಪೂರ್ಣಗೊಂಡ ಬಳಿಕ ದಾಖಲೆಗಳನ್ನು ನೀಡಿ ಮತ್ತೆ 25 ಲಕ್ಷ ಪಡೆಯಲಾಗುತ್ತದೆ ಎಂದರು.

ಡಿ.22ರ ಸಮಾರಂಭದಲ್ಲಿ ಬೆಳಗ್ಗೆ 9.30ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಪೀಟರ್ ಪಾವ್ಲ್ ಸಲ್ದಾನಾ ಆಶೀರ್ವಚನ ಹಾಗೂ ಬಲಿಪೂಜೆ ನೆರವೇರಿಸಲಿದ್ದಾರೆ. 11.30ಕ್ಕೆ ಬಿಷಪ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೊ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಎಂಎಲ್ ಸಿಗಳಾದ ಕೆ.ಪ್ರತಾಪಸಿಂಹ ನಾಯಕ್, ಎಸ್.ಎಲ್.ಭೋಜೇಗೌಡ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಲ್ಪಸಂಖ್ಯಾಕ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ., ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಯು.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವಿಸಲಾಗುತ್ತದೆ. ಈ ಹಿಂದೆ ಸೇವೆ ಸಲ್ಲಿಸಿದ ಧರ್ಮಗುರುಗಳು, ಚರ್ಚ್ ವ್ಯಾಪ್ತಿಯಿಂದ ನಿಯುಕ್ತಿಗೊಂಡ ಧರ್ಮಗುರುಗಳು, ಧರ್ಮಭಗಿನಿಯರು ಪಾಲ್ಗೊಳ್ಳಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು ಚಾ ಪರ್ಕ ಕಲಾವಿದರಿಂದ ‘ಎನ್ನನೇ ಕಥೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಚರ್ಚ್ ನವೀಕರಣದ ವೇಳೆ ಕೆಲವೊಂದು ವಿಶೇಷತೆಗಳನ್ನು ಅಳವಡಿಸಲಾಗಿದ್ದು, ಶಿಲುಬೆ ಗೋಪುರದಲ್ಲಿ 3 ಎಲ್ ಇಡಿ ಶಿಲುಬೆಗಳ ರಚನೆ, ಗೋಪುರದ ಮಧ್ಯೆ ಸುಮಾರು 10 ಅಡಿ ಎತ್ತರದ ಸಂತ ಅಂತೋನಿಯವರ ಪ್ರತಿಮೆ, ಚರ್ಚ್ ಬದಿಗಳಲ್ಲಿ ವೆಲಂಕಣಿ ಮಾತೆ, ಸಂತ ಅಂತೋನಿಯವರ ಗ್ರೊಟ್ಟೊ ನಿರ್ಮಾಣ, ಸ್ಥಾಪಕ ಧರ್ಮಗುರು ಫಾ.ಇ.ಪಿ.ಡಾಯಸ್ ಅವರ ಪ್ರತಿಮೆ ನಿರ್ಮಾಣ, ಚರ್ಚ್ ಒಳಗೆ ಭಕ್ತಾದಿಗಳ ಅನುಕೂಲಕ್ಕಾಗಿ ಮೊಣಕಾಲಿಡುವ ಬೆಂಚುಗಳ ಸಂಖ್ಯೆ ಹೆಚ್ಚಳ, 5 ಟಿವಿಗಳ ಅಳವಡಿಕೆ, ದ್ವಾರ ನಿರ್ಮಾಣ, ಅನುಗ್ರಹ ಸಭಾಭವನಕ್ಕೆ ನೇರ ರಸ್ತೆ ಸಂಪರ್ಕ, ಸಭಾಭವನದ ಅಡುಗೆ ಮನೆ ವಿಸ್ತರಣೆ, ಹೆಚ್ಚುವರಿ ಪಾತ್ರೆಗಳ ಖರೀದಿ, ಇಂಟರ್ ಲಾಕ್ ಅಳವಡಿಕೆಯ ಕಾರ್ಯ ಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ
ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲ್ ಫಾ.ವಿಜಯ್ ಲೋಬೊ, ಪಾಲನ ಮಂಡಳಿ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಮಾಧ್ಯಮ ಪ್ರತಿನಿಧಿ ವಲೇರಿಯನ್ ಪಿಂಟೋ, ಆರ್ಥಿಕ ಸಮಿತಿ ಸದಸ್ಯರಾದ ಪ್ರವೀಣ್ ವಿಜಯ್ ಡಿಸೋಜ, ಅರುಣ್ ಸಂದೇಶ್ ಡಿಸೋಜ, ಜಾನೆಟ್ ರೋಡ್ರಿಗಸ್ ಉಪಸ್ಥಿತರಿದ್ದರು.