ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ 33 ವರ್ಷದಿಂದ ಸತತವಾಗಿ ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತಂತೆ ಜನಸಮುದಾಯಕ್ಕೆ ಜಾಗೃತಿ ಮೂಡಿಸುವ, ಯುವಜನತೆಯನ್ನು ಎಚ್ಚರಿಸುವ ಮತ್ತು ವ್ಯಸನಿಗಳಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಸಮಾಜದ ಅನೇಕ ಸಮಾನ ಮನಸ್ಕರು ತಮ್ಮ ವರ್ಚಸ್ಸನ್ನೇ ಪಣಕ್ಕಿಟ್ಟು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ವಿದ್ಯಾರ್ಥಿಗಳು ದೇಶದ ಆಸ್ತಿ ಇದ್ದಂತೆ. ಇಂದು ಮಾದಕ ವಸ್ತುಗಳು ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಎಟಕುತ್ತಿವೆ. ಶಾಲಾ ಕಾಲೇಜುಗಳ ಹೊರಕ್ಯಾಂಪಸ್‍ನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವಿರುವುದು ಬಹುತೇಕ ಕಡೆಗಳಲ್ಲಿ ಪತ್ತೆಯಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬಹಳ ಅಪಾಯದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಬಹಳಷ್ಟು ಚಿಂತನೆ ನಡೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ 17 ವರ್ಷಗಳ ಹಿಂದಿನಿಂದಲೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಸ್ವಾಸ್ಥ್ಯ ಸಂಕಲ್ಪ ಎಂಬ ಕಾರ್ಯಕ್ರಮ, ಧೂಮಪಾನ ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆಯ ಮೂಲಕ ಪ್ರತೀ ವರ್ಷ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುತ್ತಾ ಬರಲಾಗಿದೆ. ಅಲ್ಲದೆ ಈ ಕಾರ್ಯಕ್ರಮದ ಯಶಸ್ವಿಗೆ ರಾಜ್ಯದಲ್ಲಿ 1145 ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ. ಜೂನ್ 26, ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯಾಗಿದ್ದು, ಈ ದಿನವನ್ನೇ “ಸ್ವಾಸ್ಥ ಸಂಕಲ್ಪ ಅಭಿಯಾನ” ವನ್ನಾಗಿ ಉದ್ಘಾಟಿಸಿ ವಾರ್ಷಿಕವಾಗಿ ಸುಮಾರು 3000ಕ್ಕೂ ಮಿಕ್ಕಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಜಿಲ್ಲಾ ವೇದಿಕೆಗಳ ಮೂಲಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, 3 ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ಇರಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದುವರೆಗೆ ಒಟ್ಟು 20,675 ಕಾರ್ಯಕ್ರಮಗಳ ಮೂಲಕ 17,51,947 ಮಂದಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಕಾರ್ಯಕ್ರಮದಲ್ಲಿ ಶಿಕ್ಷಕರೂ ಸೇರಿದಂತೆ ಎಲ್ಲರನ್ನೊಳಗೊಂಡು ಸ್ವಾಸ್ಥ ಸಂಕಲ್ಪದ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದೆ. ಈ ಕಾರ್ಯಕ್ರಮಗಳಿಗೆ ತಲಾ ರೂ.1,000/- ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನುದಾನ ನೀಡುತ್ತಿದೆ. ಈ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿಯುಳ್ಳ ನಶೆಯೆಂಬ ನರಕ, ಮದ್ಯರಾಕ್ಷಸ, ನಡಿಗೆ ನವಜೀವನದೆಡೆಗೆ, ಪ್ರಗತಿಗಾಗಿ ಜನಜಾಗೃತಿ ಎಂಬ 4 ಕಿರುಚಿತ್ರಗಳನ್ನು ರಚಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ.50 ಲಕ್ಷ ಅನುದಾನವನ್ನು ಮೀಸಲಿಡಲಾಗುತ್ತಿದೆ.
ಇತ್ತೀಚೆಗೆ ಪ್ರತೀ ಕಾಲೇಜಿನಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚನೆ, ಸ್ಕ್ರೀನಿಂಗ್ ಕಡ್ಡಾಯ ಮಾಡಬೇಕೆಂದು ಸೂಚನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಾದ ಶ್ರೀ ದರ್ಶನ್ ಹೆಚ್.ವಿ., ನಗರ ಪೋಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ಡಾ. ಅರುಣ್ ಕೆ.,ಯವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದುದರಿಂದ ವಿದ್ಯಾರ್ಥಿಗಳನ್ನು ಮತ್ತು ಯುವಜನತೆಯನ್ನು ದುಶ್ಚಟಗಳಿಂದ ಪಾರುಮಾಡಿ ‘ದುಶ್ಚಟಮುಕ್ತ ಸಮಾಜ”ವನ್ನು ರಚಿಸೋಣ ಎಂದು ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ಶ್ರೀ ನಟರಾಜ್ ಬಾದಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್., ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.