ಐತಿಹಾಸಿಕ ಸತ್ಯಗಳನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಪತ್ರಿಕೆಗಳಿಗಿದೆ, ಶಾಸಕ ಹರೀಶ್ ಪೂಂಜ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ “ಪತ್ರಿಕಾ ದಿನಾಚರಣೆ”:

 

 

ಬೆಳ್ತಂಗಡಿ: ಪತ್ರಿಕಾ ಧರ್ಮ ಬೇರೆ ಮತ್ತು ಪತ್ರಿಕಾ ಉದ್ಯಮ ಬೇರೆ. ಇವೆರಡೂ ಒಂದಾದರೆ ಸಮಾಜದಲ್ಲಿ ಅಶಾಂತಿ ಖಂಡಿತ ಎಂದು ಶಾಸಕ ಹರೀಶ್ ಪೂಂಜ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು‌ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿದರು.

 

 

ಪತ್ರಿಕಾ ವಿಶ್ವಾಸಾರ್ಹತೆಯ ಬಗ್ಗೆ ಇಂದು ಚರ್ಚೆಯಾಗಬೇಕಾಗಿದೆ. ಸಂಶೋಧನಾತ್ಮಕ ವರದಿಗಳು ಯಾವ ಹಂತದಲ್ಲಿವೆ ಎಂಬುದೂ ಚಿಂತನೀಯ ವಿಚಾರ‌. ಐತಿಹಾಸಿಕ ಸತ್ಯಗಳನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಇರುವ ಪತ್ರಿಕೆ ನಡೆಸುವವರು ಆರ್. ಟಿ.ಐ.ಕಾರ್ಯಕರ್ತರಾಗುವುದು ಅಸಮಂಜಸ. ಸಾಮಾಜಿಕ‌ ಮಾಧ್ಯಮಗಳೆಂಬ ಸವಾಲುಗಳ ನಡುವೆ ಪತ್ರಿಕೆಗಳು ತಮ್ಮ ಮೌಲ್ಯಗಳನ್ನು ಉಳಿಸಿಕೊಂಡಿರುವುದು ಗಮನಾರ್ಹ. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದರು.

 

 

 

ಉಪನ್ಯಾಸ ನೀಡಿದ ಬೆಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಜಿತು ನಿಡ್ಲೆ ಅವರು, ಭಾಷಾ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ವ ವಹಿಸಿವೆ. ವಿವೇಚನೆಯಿಂದ ಪತ್ರಕರ್ತರು ವ್ಯವಹರಿಸಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು.

 

 

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಸಾದ ಶೆಟ್ಟಿ ಏಣಿಂಜೆ ವಹಿಸಿದ್ದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಇದ್ದರು.
ಈ ಬಾರಿಯ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪತ್ರಕರ್ತ ಮನೋಹರ ಬಳಂಜ- ಲಿಖಿತಾ ದಂಪತಿಯ ಪುತ್ರಿ ದಿತಿಯ ಸ್ಮರಣಾರ್ಥ ಆರು ಮಂದಿ ಆನಾರೋಗ್ಯ ಪೀಡಿತರಿಗೆ ದಿತಿ ಸಾಂತ್ವನ ನಿಧಿಯನ್ನು ಶಾಸಕರು ಹಸ್ತಾಂತರಿಸಿದರು.
ಸಂಘದ ಕಾರ್ಯದರ್ಶಿ ತುಕಾರಾಮ್ ಬಿ. ಸ್ವಾಗತಿಸಿದರು. ಮನೋಹರ ಸಂದೇಶ ವಾಚಿಸಿದರು. ಅಚುಶ್ರೀ ಬಾಂಗೇರು ಉಪನ್ಯಾಸಕರ ಪರಿಚಯ ನೀಡಿದರು. ಅಶ್ರಫ್ ಆಲಿ ಸಾಂತ್ವನ ನಿಧಿಯ ಮಾಹಿತಿ ನೀಡಿದರು. ಗಣೇಶ್ ಶಿರ್ಲಾಲು ವಂದಿಸಿದರು.ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!