ಬೆಳ್ತಂಗಡಿ: ಕೀರ್ತಿಶೇಷರಾದ ಡಾ. ಬಿ. ಯಶೋವರ್ಮ ಮತ್ತು ವಿಜಯರಾಘವ ಪಡ್ವೆಟ್ನಾಯರ ಸರಳ ಹಾಗೂ ಶಿಸ್ತುಬದ್ಧ ಜೀವನ, ಸೇವೆ-ಸಾಧನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಸೋನಿಯಯಶೋವರ್ಮ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್, ಎಸ್.ಡಿ.ಎಂ. ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಗ್ಯಾರೇಜ್ ಮಾಲಕರ ಸಂಘ, ಜನಾರ್ಧನ ಸ್ವಾಮಿ ಸೇವಾ ಟ್ರಸ್ಟ್ ಸಹಕಾರದಲ್ಲಿ ಯಶೋವಿಜಯ: ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲಾವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಸ್ತಿನ ಸಿಪಾಯಿಯಾಗಿದ್ದ ಬಿ. ಯಶೋವರ್ಮರು ಪ್ರಾಂಶುಪಾಲರಾಗಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಅಳವಡಿಸಿ ಯಶಸ್ವಿಯಾದರು. ಅವರು ತೋಟಗಾರಿಕೆ, ಓದುವುದು, ಬರೆಯುವುದು, ಪ್ರಕೃತಿ-ಪರಿಸರ ಸಂರಕ್ಷಣೆ, ಪ್ರವಾಸ ಮೊದಲಾದ ಹಲವು ಹವ್ಯಾಸಗಳನ್ನು ಹೊಂದಿದ್ದರು. ತಾವು ಕಲಿತ, ಓದಿದ ಹೊಸ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ವಿಜಯರಾಘವ ಪಡ್ವೆಟ್ನಾಯರು ಸರಳ ವ್ಯಕ್ತಿತ್ವದ ಸಜ್ಜನರಾಗಿದ್ದು ಎಲ್ಲರನ್ನೂ ಪ್ರೀತಿ-ವಿಶ್ವಾಸದಿಂದ ಕಾಣುತ್ತಿದ್ದರು. ಇಬ್ಬರು ವ್ಯಕ್ತಿಗಳ ಜೀವನ, ಸೇವೆ-ಸಾಧನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಸೋನಿಯಯಶೋವರ್ಮ ಅಭಿಪ್ರಾಯಪಟ್ಟರು.
ಡಾ. ಪ್ರದೀಪ್ ನಾವೂರು, ಬದುಕುಕಟ್ಟೋಣ ತಂಡದಿಂದ ಕಲ್ಮಂಜದಲ್ಲಿ ನಿರ್ಮಿಸಿದ ನೂತನ ಮನೆ “ವಿಜಯ” ಇದರ ಕೀ ಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಡಾ. ಬಿ. ಯಶೋವರ್ಮರು ರಚಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
600ಕ್ಕೂ ಮಿಕ್ಕಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್, ಬದುಕಿನಲ್ಲಿ ಸಾತ್ವಿಕ ಗುಣಗಳನ್ನು ಅಳವಡಿಸಿಕೊಂಡು ಸಾಧ್ಯವಾದಷ್ಟು ಸೇವಾಕಾರ್ಯ ಮಾಡಿ ಸಮಾಜದ ಋಣ ತೀರಿಸಬೇಕು ಎಂದು ಹೇಳಿದರು.
ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್‌ವರ್ಮ, ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್‌ಕುಮಾರ್ ಶೆಟ್ಟಿ ಶುಭಾಶಂಸನೆ ಮಾಡಿದರು.
ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ
ಸಂದೇಶ್ ರಾವ್, ಶ್ರೀಧರ್ ಕೆ.ವಿ., ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಕೆ. ಉಪಸ್ಥಿತರಿದ್ದರು.
ಬದುಕು ಕಟ್ಟೋಣ ಸೇವಾ ಟ್ರಸ್ಟ್ ಅಧ್ಯಕ್ಷ ಧನಂಜಯ ರಾವ್ ಅಧ್ಯಕ್ಷತೆ ವಹಿಸಿದರು. ಸಂಚಾಲಕ
ಮೋಹನ್ ಕುಮಾರ್ ಸ್ವಾಗತಿಸಿದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಧನ್ಯವಾದವಿತ್ತರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಕೊಡುಗೆಯಾಗಿ ನೀಡಿದ 350 ಪುಸ್ತಕಗಳನ್ನು ಕರ್ನೋಡಿ ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಯಿತು.