ಬೆಳ್ತಂಗಡಿ : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು ಪತ್ರಿಕಾ ಗೋಷ್ಠಿಯಲ್ಲಿ ಕೊಟ್ಟ ಭರವಸೆಯಂತೆ ಕಂದಾಯ ಇಲಾಖೆಯ ಬೆಳ್ತಂಗಡಿ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿಯು ಮೇ 23ನೇ ಶುಕ್ರವಾರ ತಾಲೂಕು ಆಡಳಿತ ಸೌಧದ ಮೊದಲ ಮಹಡಿಗೆ ಸ್ಥಳಾಂತರಗೊಂಡಿದೆ. ಇದರಿಂದ ವಿವಿಧ ಗ್ರಾಮಗಳಿಂದ ಅಗತ್ಯ ಕೆಲಸಗಳಿಗೆ ಬರುವ ನಾಗರಿಕರಿಗೆ ಅನುಕೂಲವಾಗಲಿದೆ. ಹಳೆಯ ತಾಲೂಕು ಕಚೇರಿ ಬಳಿಯ ಕಟ್ಟಡ ತೆರವುಗೊಂಡಾಗ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದ ಕಂದಾಯ ನಿರೀಕ್ಷಕರ ಕಚೇರಿ 2018ರಲ್ಲಿ ಮಿನಿ ವಿಧಾನ ಸೌಧ ಉದ್ಘಾಟನೆಗೊಂಡ ಬಳಿಕವೂ ಕೆಲವು ವರ್ಷಗಳಿಂದ ಐಬಿ ರಸ್ತೆಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದುವರೆಗೂ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿ ಇದೀಗ ಸ್ಥಳಾಂತರಗೊಳ್ಳುತ್ತಿದ್ದು ಸೋಮವಾರದಿಂದ ತಾಲೂಕು ಆಡಳಿತ ಸೌಧ (ಮಿನಿ ವಿಧಾನ ಸೌಧ)ದ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸಲಿದೆ.
ಕೆಲವು ದಿನಗಳ ಹಿಂದೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಬೆಳ್ತಂಗಡಿಯಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದ ಸಂದರ್ಭ “ತಾಲೂಕಿನಲ್ಲಿ ಸುಸಜ್ಜಿತ ಬೃಹತ್ ಮಿನಿ ವಿಧಾನ ಸೌಧ ಇದ್ದರೂ ಕಂದಾಯ ನಿರೀಕ್ಷಕರ ಕಛೇರಿ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಯಾಕೆ” ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ ಅವರು “ಇದು ನನ್ನ ಗಮನಕ್ಕೆ ಬಂದಿರಲಿಲ್ಲ , ಈ ಬಗ್ಗೆ ಕೂಡಲೇ ಪರಿಶೀಲಿಸಿ ಕಂದಾಯ ನಿರೀಕ್ಷಕರ ಕಚೇರಿಯನ್ನು ಶೀಘ್ರವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ತಾಲೂಕು ಆಡಳಿತ ಸೌಧಕ್ಕೆ ಶಿಫ್ಟ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದಂತೆ ಇದೀಗ ಬೆಳ್ತಂಗಡಿ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿಯು ಶಿಫ್ಟ್ ಆಗಿರುವುದು ನಾಗರಿಕರಿಗೆ ಅನುಕೂಲವಾಗಲಿದೆ.