ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಏರೋನಾಟಿಕ್ಸ್
ಇಂಜಿನಿಯರ್ ನಿಗೂಢ ಸಾವು ಪ್ರಕರಣ ಇದೀಗ ಬಿಗ್ ಟ್ವಿಸ್ಟ್ ಪಡೆದಿದ್ದು ಆಕೆ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಧರ್ಮಸ್ಥಳದ ಬೋಳಿಯೂರು ನಿವಾಸಿ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿ ಮಗಳು ಆಕಾಂಕ್ಷ ಎಸ್ ನಾಯರ್ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್ ಯುವತಿ. ಮೇ 17ರಂದು ಪಂಜಾಬ್ ನ ಯುನಿವರ್ಸಿಟಿ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂಬ ಮಾಹಿತಿ ಲಭ್ಯವಾಗುತ್ತಿದ್ದು ಎಲ್ ಪಿ ಯುನಿವರ್ಸಿಟಿಯ ಪ್ರೊಫೆಸರ್ ಜೊತೆ ಪ್ರೇಮ ವೈಫಲ್ಯ ಎಂದು ತಿಳಿದುಬಂದಿದೆ. ಪ್ರೊಫೆಸರ್ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದು ಎರಡು ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯೂ ಎಂಬವರಾಗಿದ್ದಾರೆ. ಆತ್ಮಹತ್ಯೆ ಗೂ ಮುನ್ನ
ಮ್ಯಾಥ್ಯೂ ಜೊತೆ ಮನೆಗೆ ಹೋಗಿ ಆಕಾಂಕ್ಷ ಜಗಳವಾಡಿದ್ದು ಬಳಿಕ ಕಾಲೇಜಿನಲ್ಲೂ ಜಗಳ ಮಾಡಿ ಆತನ ಕಚೇರಿಯಿಂದ ಹೊರಗೆ ಬಂದು ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಪ್ರೊಫೆಸರ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಹೆಚ್ಚಿನ ಮಾಹಿತಿಗಳು ಮುಂದಿನ ತನಿಖೆಯಿಂದಲೇ ತಿಳಿದು ಬರಬೇಕಾಗಿದೆ.
ಸರ್ಟಿಫಿಕೇಟ್ ಪಡೆಯಲು ಹೋದ ಆಕಾಂಕ್ಷ ಮೃತ ಪಟ್ಟ ಬಗ್ಗೆ ಮನೆಯವರಿಗೆ ಕರೆ ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಆಕಾಂಕ್ಷಾಳ ತಂದೆ ತಾಯಿ ಹಾಗೂ ಸಹೋದರ ಪಂಜಾಬಿಗೆ ತೆರಳಿ ಪೊಲೀಸರಿಂದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಸ್ಥಳೀಯ ಪೊಲೀಸರು ಕಾಲೇಜಿನ ಸಿ.ಸಿ ಟಿ.ವಿ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಆತ್ಮಹತ್ಯೆಗೆ ಪ್ರೇರಣೆ ಹಿನ್ನಲೆಯಲ್ಲಿ ಮ್ಯಾಥ್ಯೂ ವಿರುದ್ದ ಪಂಜಾಬ್ ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಬಳಿಕ ಹೆತ್ತವರಿಗೆ ಮೃತದೇಹ ಹಸ್ತಾಂತರವಾಗಲಿದೆ.
ಇದಾದ ಬಳಿಕ ಮೃತದೇಹವನ್ನು ಧರ್ಮಸ್ಥಳಕ್ಕೆ ತರಲಿದ್ದು ಅಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.