ಬೆಳ್ತಂಗಡಿ : ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ, ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್ (22) ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ಸಂಜೆ ನಡೆದಿತ್ತು. ರಾತ್ರಿಯೇ ಪೋಷಕರು ಮಂಗಳೂರು ವಿಮಾನದ ಮೂಲಕ ದೆಹಲಿ ತಲುಪಿ ಬಳಿಕ ಮೇ.18 ರಂದು ಬೆಳಗ್ಗೆ ಪಂಜಾಬ್ ಗೆ ವಿಮಾನದ ಮೂಲಕ ಹೋಗಿ ಅಲ್ಲಿಂದ ವಾಹನದ ಮೂಲಕ ಮೇ.18 ರಂದು ಸಂಜೆ 6 ಗಂಟೆಗೆ ಪೋಷಕರು ಮೃತದೇಹ ಇರುವ ಪಂಜಾಬ್ ರಾಜ್ಯದ ಜಲಂದರ್ ಜಿಲ್ಲೆಯ ಪಗ್ವಾಡ ಸಿವಿಲ್ ಸರಕಾರಿ ಆಸ್ಪತ್ರೆಗೆ ತಲುಪಿದ್ದಾರೆ. ಬಳಿಕ ಪ್ರಕರಣದ ಬಗ್ಗೆ ಜಲಂದರ್ ಪೊಲೀಸ್ ಠಾಣೆಯಲ್ಲಿ ಸಹೋದರ ಆಕಾಶ್ ನಾಯರ್ ದೂರು ನೀಡಿದ್ದಾರೆ. ಮೃತದೇಹದ ಶವಪರೀಕ್ಷೆ ಮೇ.19 ಕ್ಕೆ ನಡೆಯಲಿದ್ದು ಬಳಿಕ ಧರ್ಮಸ್ಥಳದ ಬೊಳಿಯರ್ ಮನೆಗೆ ತೆಗೆದುಕೊಂಡು ಬಂದು ಅಂತ್ಯಸಂಸ್ಕಾರ ಮಾಡಲಿದ್ದಾರೆ.
ಪಂಜಾಬಿನ ಎಲ್.ಪಿ.ಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಜರ್ಮನ್ ಎರಡು ವರ್ಷದ ಕೋರ್ಸ್ ಗೆ ಹೋಗುವುದಕ್ಕೆ ಪಂಜಾಬ್ ಎಲ್.ಪಿ.ಯು ಪಗ್ವಾಡ ಕಾಲೇಜಿನಿಂದ ವಿದ್ಯಾಭ್ಯಾಸ ಮಾಡಿದ ಸರ್ಟಿಫಿಕೇಟ್ ಪಡೆಯಲು ತೆರಳಿದ ವೇಳೆ ನಿಗೂಢವಾಗಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು.