ಮೀಸಲು ಅರಣ್ಯದಿಂದ ಮರ ದೋಚಲು ಯತ್ನ: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಾಳಿ: ಮರ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ವಶಕ್ಕೆ:

 

 

 

 

ಬೆಳ್ತಂಗಡಿ : ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನುಗ್ಗಿ ಯಂತ್ರ ಬಳಸಿ ಲಕ್ಷಾಂತರ ಬೆಳೆಬಾಳುವ ಮರಗಳನ್ನು ಕಡಿಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ
ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೀಸಲು ಅರಣ್ಯ ಪ್ರದೇಶದೊಳಗೆ ಹಿಟಾಚಿ ಬಳಸಿ ರಸ್ತೆ ನಿರ್ಮಾಣ ಮಾಡಿ ಹೆಬ್ಬಲಸು ಸೇರಿದಂತೆ ಬೆಳೆಬಾಳುವ ಮರಗಳನ್ನು ಕಡಿಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್.ಟಿ.ಎಮ್ ನೇತೃತ್ವದ ತಂಡ ಏ.16 ರಂದು ಸಂಜೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡು ಬೆಳ್ತಂಗಡಿ ನ್ಯಾಯಾಲಯ ಅನುಮತಿ ಪಡೆದು ಏ.19 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿ ವೇಳೆ ಸಾಗಾಟ ಮಾಡಲು ಕಡಿದು ದಾಸ್ತಾನು ಮಾಡಿದ್ದ ಸುಮಾರು 3 ಲಕ್ಷ ಮೌಲ್ಯದ ವಿವಿಧ ಜಾತಿಯ ಮರಗಳು, 30 ಲಕ್ಷ ಮೌಲ್ಯದ ಹಿಟಾಚಿ ಯಂತ್ರ, 60 ಸಾವಿರ ಮೌಲ್ಯದ ಮರ ಕಟ್ಟಿಂಗ್ ಮೆಷಿನ್,15 ಸಾವಿರ ಮೌಲ್ಯದ ಒಂದು ಕಬ್ಬಿಣದ ಸರಪಳಿ ಸೇರಿ ಒಟ್ಟು 33,75,000 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಡೊಂಕಬೆಟ್ಟು ನಿವಾಸಿ ಪ್ರಕಾಶ್ ಪೂಜಾರಿ ಮತ್ತು ಹಿಟಾಚಿ ಮಾಲಕ & ಅಪರೇಟರ್ ಅಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೂರಳ್ ಬೆಟ್ಟು ಗ್ರಾಮದ ನಿವಾಸಿ ಕರುಣಾಕರ ಭಂಡಾರಿ ವಿರುದ್ಧ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ತನಿಖೆಯನ್ನು ಅರಣ್ಯಾಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್.ಟಿ.ಎನ್, ಡಿ.ಆರ್‌ಎಫ್.ಒ ಕೆ.ರವೀಂದ್ರ ನಾಯ್ಕ್, ಡಿ.ಆರ್.ಎಫ್.ಒ ಸಂದೀಪ್(ವಿಶೇಷ ಪತ್ತೆ ದಳ), ಅರಣ್ಯ ಪಾಲಕ ಪರಶುರಾಮ, ಗಸ್ತು ಅರಣ್ಯ ಪಾಲಕ ಪ್ರತಾಪ್, ವಾಹನ ಚಾಲಕ ಕುಶಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

error: Content is protected !!