ಬೆಳ್ತಂಗಡಿ: ಹಳೇ ವಿದ್ಯಾರ್ಥಿ ಸಂಘ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೊಡಿ ಲಾಯಿಲ, ಬದುಕು ಕಟ್ಟೋಣ ಬನ್ನಿ ಟ್ರಸ್ಟ್ ಉಜಿರೆ ,ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆ ಬೆಂಗಳೂರು, ರೋಟರಿ ಇಂದಿರಾ ನಗರ ಬೆಂಗಳೂರು ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಸಹಕಾರದೊಂದಿಗೆ ಸ್ನೇಹ ಸಮ್ಮಿಲನ ಮತ್ತು ನವೀಕರಣಗೊಂಡ ಶಾಲೆಯ ಹಸ್ತಾಂತರ ಕಾರ್ಯಕ್ರಮವು ಎ 06 ರಂದು ನಡೆಯಿತು. ಹಳೇ ವಿದ್ಯಾರ್ಥಿ ಸಂಘದ ಕಛೇರಿಯನ್ನು ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಉದ್ಘಾಟಿಸಿ ಸರ್ಕಾರಿ ಶಾಲೆಯನ್ನು ಉಳಿಸುವಂತಹ ಕೆಲಸವನ್ನು ಮೋಹನ್ ಕುಮಾರ್ ನೇತೃತ್ವದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದೆ. ಎಲ್ಲರೂ ಇವರಂದಿಗೆ ಕೈಜೋಡಿಸುವ ಕೆಲಸ ಮಾಡಬೇಕಿದೆ. ಕರ್ನೊಡಿ ಶಾಲೆಯ ಅಭಿವೃದ್ದಿಗೆ ಪಣ ತೊಟ್ಟ ಇಲ್ಲಿನ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯ ಶ್ಲಾಘನೀಯ ಎಂದ ಅವರು ರೂ 5ಲಕ್ಷ ರೂಪಾಯಿಯನ್ನು ಹಳೇ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಡಿಪಾಸಿಟ್ ಮಾಡಿ ಪ್ರತೀ ವರ್ಷ ಅದರ ಬಡ್ಡಿಯ ಹಣವನ್ನು ಶಾಲೆಯ ಕಾರ್ಯಚಟುವಟಿಕೆಗಳಿಗೆ ವಿನಿಯೋಗಿಸಬಹುದು ಎಂದರು.