ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಪೆಟ್ರೋಲ್ ಸುರಿದು ಸಾಯಿಸುವುದಾಗಿ ಬೆದರಿಸಿದ ಅಪರಾಧಿಗೆ ಶಿಕ್ಷೆ ಪ್ರಕಟ: 11 ವರ್ಷ ಜೈಲುವಾಸ 55 ಸಾವಿರ ರೂ. ದಂಡ


ಸಾಂದರ್ಭಿಕ ಚಿತ್ರ

ಧಾರವಾಡ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಪೆಟ್ರೋಲ್ ಸುರಿದು ಸಾಯಿಸುವುದಾಗಿ ಬೆದರಿಸಿದ ಅಪರಾಧಿಗೆ ಎರಡನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೋ ನ್ಯಾಯಾಲಯ 11 ವರ್ಷ ಶಿಕ್ಷೆ ಪ್ರಕಟಿಸಿದೆ.

ಘಟನೆಯ ವಿವರ:
2022ರ ಜುಲೈ 5ರಂದು ಧಾರವಾಡ ತಾಲೂಕಿನ ಸಲಕಿನಕೊಪ್ಪ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷೆಗೊಳಗಾದ ಅಪರಾಧಿ ಸಿದ್ದನಗೌಡ ಮರಿಲಿಂಗನಗೌಡರ ಅಪ್ರಾಪ್ತ ಬಾಲಕಿ ಮೇಲೆ ಸತತ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಈ ವಿಚಾರ ಯಾರಿಗಾದರು ಹೇಳಿದರೆ ಪೆಟ್ರೋಲ್ ಸುರಿದು ಸಾಯಿಸುವುದಾಗಿ ಅಪರಾಧಿ ಬಾಲಕಿಯನ್ನು ಬೆದರಿಸಿದ್ದ.

ಬಾಲಕಿ 7 ತಿಂಗಳ ಗರ್ಭಿಣಿಯಾಗಿದ್ದಾಗ ನೋವು ಕಾಣಿಸಿಕೊಂಡಿತ್ತು. ಆರೋಪಿಗೆ ಶಿಕ್ಷೆ ಆಗುವ ಮೊದಲೇ ಬಾಲಕಿಗೆ ಹೆರಿಗೆಯಾಗಿದ್ದು, ಮಗುವಿನ ಡಿಎನ್ಎ ಪರೀಕ್ಷೆಯಲ್ಲಿ ಆರೋಪಿಯೇ ಮಗುವಿನ ಜೈವಿಕ ತಂದೆ ಎಂದು ಸಾಬೀತಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಸಿದ್ದನಗೌಡ ಮತ್ತೋರ್ವನನ್ನು ಸಿಲುಕಿಸಲು ಯತ್ನಿಸಿದ್ದ. ಬಾಲಕಿಯ ಮುಂದೆ ನಿಂತು ಬೇರೊಬ್ಬನ ಹೆಸರು ಹೇಳುವಂತೆ ಮಾಡಿದ್ದನು. ಆದರೆ, ತನಿಖಾಧಿಕಾರಿಗಳ ಎದುರು ಬಾಲಕಿ ಸಿದ್ದನಗೌಡನ ಹೆಸರು ಹೇಳಿದ್ದಳು. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಪರಾಧಿ 11 ವರ್ಷ ಜೈಲು ವಾಸ ಹಾಗೂ 55 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಕಾನೂನು ನಿರ್ವಹಣಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ಹಾಗೂ 55 ಸಾವಿರ ದಂಡದಲ್ಲಿ 50 ಸಾವಿರ ರೂಪಾಯಿಯನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಸೂಚಿಸಿದೆ.

ಬಾಲಕಿ ಪರವಾಗಿ ಸರ್ಕಾರಿ ಅಭಿಯೋಜಕಿ ಶೈಲಾ ಅಂಗಡಿ ವಾದ ಮಂಡಿಸಿದ್ದರು.

error: Content is protected !!