ಉಪ್ಪಿನಂಗಡಿ: ಚಿನ್ನಾಭರಣ ಕದ್ದ ಮಹಿಳಾ ಆರೋಪಿ ಸೆರೆ

ಉಪ್ಪಿನಂಗಡಿ: ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಎಗರಿಸಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಸೆರೆಹಿಡಿದಿದ್ದಾರೆ.
ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ನಿವಾಸಿ ಮುಸ್ತಫಾ ಅವರ ಪತ್ನಿ ಅಬೀಬಾ ಅವರು ಭಾವನ ಪತ್ನಿ ಹಸೀರಾಬಾನು ಜತೆಗೆ ಜ. 6ರಂದು ಮದುವೆ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್ -1 ಮತ್ತು ಹಸೀರಾಬಾನುರವರ ಸುಮಾರು 106 ಗ್ರಾಂ ತೂಕದ ಚಿನ್ನಾಭರಣವನ್ನು ಒಂದು ಬಾಕ್ಸ್ ಒಳಗೆ ಹಾಕಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಮದುವೆ ಮುಗಿಸಿ ಮನೆಗೆ ಬರುತ್ತಿದ್ದಾಗ ಬಸ್ಸಿನಲ್ಲಿ ಇವರ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿತ್ತು. ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನದ ಬಾಕ್ಸ್ ಕಳವಾಗಿತ್ತು.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರಿಗೆ ಬ್ಯಾಗ್ ಕಳವು ಮಾಡುವುದರಲ್ಲಿ ಕುಖ್ಯಾತಿ ಗಳಿಸಿದ್ದ ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ(31)ಳನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಕಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದಾಳೆ.

ಕಳವಾಗಿದ್ದ ಚಿನ್ನಾಭರಣಗಳನ್ನು ಆಕೆಯ ಸ್ಕೂಟಿಯಿಂದ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ವೇಳೆ 2021ರಿಂದಲೇ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

error: Content is protected !!