ಬೆಂಗಳೂರು: ಟ್ಯೂಷನ್‌ಗೆ ಬರುತ್ತಿದ್ದ 10ನೇ ತರಗತಿ ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಿ ಬೇರೆ ಊರಿಗೆ ಕರೆದೊಯ್ದಾತ ಪೊಲೀಸರ ನಿರಂತರ ಹುಡುಕಾಟದ ಬಳಿಕ ಸೆರೆಯಾಗಿದ್ದಾನೆ.
ಅಭಿಷೇಕ್ ಗೌಡ (25) ಎಂಬಾತ ಹಲವು ವರ್ಷಗಳಿಂದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ. ಸಂತ್ರಸ್ತ ಬಾಲಕಿಯೂ ಕಳೆದ ಆರು ವರ್ಷಗಳಿಂದ ಇದೇ ಟ್ಯೂಷನ್‌ಗೆ ಬರುತ್ತಿದ್ದಳು. ಕಳೆದ ನವೆಂಬರ್ 23ರಂದು ಎಂದಿನಂತೆಟ್ಯೂಷನ್‌ಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಮಗಳು ಬಾರದಿರುವುದರಿಂದ ಆತಂಕಗೊಂಡ ಪೋಷಕರು ಆರೋಪಿಯ ಮನೆಗೆ ಹೋದಾಗ ಬೀಗ ಹಾಕಿರುವುದನ್ನು ಕಂಡಿದ್ದರು. ಟ್ಯೂಷನ್ ಟೀಚರ್ ಪುಸಲಾಯಿಸಿ ಮಗಳನ್ನು ಕರೆದೊಯ್ದಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ಪೋಷಕರ ದೂರಿನ ಮೇರೆಗೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯ ಮನೆ ಜಾಲಾಡಿದಾಗ ಉದ್ದೇಶಪೂರ್ವಕವಾಗಿ ಮೊಬೈಲ್ ಬಿಟ್ಟುಹೋಗಿರುವುದನ್ನು ಕಂಡುಕೊAಡಿದ್ದರು. ಒಂದು ವರ್ಷದಿಂದ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹಾಗೂ ಮದುವೆಯಾಗಿರುವ ಬಗೆಗಿನ ವಿಡಿಯೋ ಮೊಬೈಲ್‌ನಲ್ಲಿ ಇರುವುದನ್ನು ಪೊಲೀಸರು ಗಮನಿಸಿದ್ದರು. ಆರೋಪಿ ಹಾಗೂ ಬಾಲಕಿ ಬಳಿ ಮೊಬೈಲ್ ಇರದ ಕಾರಣ ಆರಂಭದಲ್ಲಿ ಪೊಲೀಸರಿಗೆ ಪತ್ತೆ ಹಚ್ಚುವುದು ಕಷ್ಟವಾಗಿತ್ತು. ದಾರಿಯಲ್ಲಿ ಆರೋಪಿ ಆಕೆಯನ್ನು ಕರೆದುಕೊಂಡು ಹೋಗಿರುವ ಬಗ್ಗೆ ಸಿಸಿಟಿವಿ ಕ್ಯಾಮರಾ ಮೂಲಕ ಖಚಿತಪಡಿಸಿದ್ದರು. ಪೊಲೀಸರಿಗೆ ತಾವಿರುವ ಬಗ್ಗೆ ಗೊತ್ತಾಗದಿರಲು ಆರೋಪಿ ಮನೆಯಲ್ಲೇ ಮೊಬೈಲ್ ಬಿಟ್ಟುಹೋಗಿದ್ದ. ಅಲ್ಲದೇ ಹೋಗುವಾಗ 70 ಸಾವಿರ ರೂಪಾಯಿ ಹಣ ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾನಿರುವ ಜಾಗ ಯಾರಿಗೂ ತಿಳಿಯಬಾರದು ಎಂದು ಆರೋಪಿ, ಮಂಡ್ಯದ ಮಳವಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಬಾಲಕಿಯನ್ನು ಇರಿಸಿದ್ದ. ಆನ್‌ಲೈನ್ ಸೇರಿದಂತೆ ಇತರ ಹಣದ ವಹಿವಾಟು ಮಾಡದೇ ಚಾಣಾಕ್ಷತನ ಮರೆದಿದ್ದ. ಆರೋಪಿಗಾಗಿ ಹುಡುಕಾಡಿದ ಪೊಲೀಸರು ಕೊನೆಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು. ಮಳವಳ್ಳಿ ಸಮೀಪ ಸಾರ್ವಜನಿಕರೊಬ್ಬರು ಪ್ರಕಟಣೆಯನ್ನು ಕಂಡು, ಕೂಡಲೇ ಅಭಿಷೇಕ್ ಬಗ್ಗೆ ಮನೆ ಮಾಲೀಕರ ಗಮನಕ್ಕೆ ತಂದಿದ್ದರು. ಈ ವಿಷಯಯನ್ನು ಜೆ.ಪಿ.ನಗರ ಪೊಲೀಸರಿಗೆ ಮುಟ್ಟಿಸಿದ್ದರು. ಇದರ ಆಧಾರದಲ್ಲಿ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಘೋಷಿಸಲಾದ 25 ಸಾವಿರ ರೂ. ನಗದು ಬಹುಮಾನ ಸ್ವೀಕರಿಸಲು ಮಾಹಿತಿದಾರರು ತಿರಸ್ಕರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಅಭಿಷೇಕ್ ಗೌಡಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಒಂದು ಮಗುವಿದೆ. ವೈಯಕ್ತಿಕ ಕಾರಣಗಳಿಂದ ಪತ್ನಿಯಿಂದ ಆರೋಪಿ ದೂರವಾಗಿದ್ದ. ನ್ಯೂಟ್ರಿಷಿಯನ್ ಆಗಿಯೂ ಕೆಲಸ ಮಾಡುತ್ತಿದ್ದ. ಡಿಪ್ಲೋಮಾ ವ್ಯಾಸಂಗ ಮಾಡಿದ್ದ.