ಕಟಪಾಡಿ: ಪ್ರವಾಸಕ್ಕೆ ತೆರಳಿದ್ದ ವಾಹನ ರಸ್ತೆ ಮಧ್ಯೆ ಆಕಸ್ಮಿಕವಾಗಿ ಹೊತ್ತಿ ಉರಿದ ಘಟನೆ ಕುದುರೆಮುಖದ ಎಸ್.ಕೆ. ಬಾರ್ಡರ್ ಸಮೀಪದಲ್ಲಿ ನಡೆದಿದ್ದು, ಪವಾಡ ಸದೃಶವಾಗಿ ಕಟಪಾಡಿ ಮೂಲದ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ.
ಇಬ್ಬರು ಮಕ್ಕಳು ಸೇರಿದಂತೆ ಚಾಲಕ ಸಹಿತ 14 ಮಂದಿ ಟ್ರಾವೆಲ್ಲರ್ ನಲ್ಲಿ ಕುದುರೆಮುಖದತ್ತ ಹೊರಟಿದ್ದ ವೇಳೆ ಮೊದಲು ವಾಹನದಲ್ಲಿ ಸುಟ್ಟ ವಾಸನೆ ಬಂದಿತ್ತು. ಈ ಬಗ್ಗೆ ಚಾಲಕನನ್ನು ಕೇಳಿದಾಗ ಚಾಲಕ ಸರಿಯಾಗಿ ಉತ್ತರಿಸಲಿಲ್ಲ. ಅಲ್ಲಿಂದ ಸುಮಾರು 6-7 ಕಿ.ಮೀ ಪ್ರಯಾಣಿಸಿದಾಗ ಹೆಚ್ಚಾಗಿ ಸುಟ್ಟ ವಾಸನೆ ಬಂದಿದ್ದು ತಕ್ಷಣ ಏಣಗುಡ್ಡೆ ಬಬ್ಬುಸ್ವಾಮಿ ಭಕ್ತ, ಅಖೀಲೇಶ್ ಕೋಟ್ಯಾನ್ ಅವರು ವಾಹನವನ್ನು ನಿಲ್ಲಿಸಿ ಎಲ್ಲರನ್ನೂ ರಸ್ತೆ ಮಧ್ಯೆ ವಾಹನದಿಂದ ಕೆಳಕ್ಕೆ ಇಳಿಸಿದರು. ತತ್‌ಕ್ಷಣವೇ ಟೂರಿಸ್ಟ್ ವಾಹನಕ್ಕೆ ಬೆಂಕಿಯ ಕೆನ್ನಾಲಿಗೆ ಆವರಿಸಿ ಹೊತ್ತಿ ಉರಿದಿತ್ತು.
ಈ ಮಧ್ಯೆ ವಾಹನದಲ್ಲಿದ್ದ ತಮ್ಮ ಬ್ಯಾಗ್‌ಗಳನ್ನು ಹೊರತರುವಲ್ಲಿಯೂ ತಂಡ ಯಶಸ್ವಿಯಾಗಿತ್ತು. ಅಲ್ಲಿಂದ ಬದಬಲಿಯಾಗಿ ಬಂದ ಬಜಗೋಳಿ ಬಳಿಯ ಟೆಂಪೋ ಟ್ರಾವೆಲ್ಲರ್ ಮೂಲಕ ಪ್ರವಾಸಿಗರು ಪ್ರವಾಸವನ್ನು ಮುಂದುವರೆಸಿದ್ದಾರೆ.