ಸಾಂದರ್ಭಿಕ ಚಿತ್ರ
ಬೆಂಗಳೂರು: ಒಂದು ವರ್ಷದ ಮಗುವಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಿ ನಾರಾಯಣ ಹೆಲ್ತ್ ಸಿಟಿಯ ವೈದ್ಯರ ತಂಡ ದಾಖಲೆ ನಿರ್ಮಿಸಿದೆ. ಆದರೆ ಪುಟಾಣಿ ಕಂದನ ಜೀವ ಉಳಿಸಿದ್ದು ಮತ್ತೊಂದು ಎರಡೂವರೆ ವರ್ಷದ ಮಗುವಿನ ಹೃದಯ.
ಒಂದು ವರ್ಷದ ಮಗುವಿಗೆ 10 ತಿಂಗಳಿದ್ದಾಗಲೇ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೃದಯ ಸಮಸ್ಯೆಯಿಂದ ಕಾಮಲೆ, ತೂಕನಷ್ಟ, ಕಿಬ್ಬೊಟ್ಟೆಯಲ್ಲಿ ದ್ರವ ಶೇಖರಣೆ ಮತ್ತು ಬೇಕಾದಷ್ಟು ಆಹಾರ ತಿನ್ನಲಾಗದೆ ಗಂಭೀರ ಸ್ವರೂಪ ಪಡೆದಿತ್ತು. ಮಗುವಿನ ಆರೋಗ್ಯದಲ್ಲಿ ಉಂಟಾದ ಏರುಪೇರನ್ನು ಗಮನಿಸಿದ ಪೋಷಕರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಕರೆತಂದಿದ್ದರು.
ಮಗುವನ್ನು ಪರಿಶೀಲಿಸಿದ ವೈದ್ಯರು ರಿಸ್ಟ್ರಿಕ್ಟಿವ್ ಕಾರ್ಡಿಯೋ ಮಯೀಪತಿ (ಆರ್‌ಸಿಎಂ) ಎಂಬ ಹೆಸರಿನ ಹೃದಯ ಸಂಬAಧಿತ ಕಾಯಿಲೆ ಇದ್ದು, ಅಂತಿಮ ಘಟ್ಟದಲ್ಲಿರುವುದು ಪತ್ತೆ ಹಚ್ಚಿದ್ದಾರೆ. ಹೀಗಾಗಿ 72 ಗಂಟೆಯೊಳಗೆ ಮಗುವಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತೀರ್ಮಾನಿಸಿ, ಒಂದು ವರ್ಷದ ಮಗುವಿಗೆ ಹೊಂದುವ ಹೃದಯಕ್ಕೆ ವೈದ್ಯರು ಹುಡಕಾಟ ನಡೆಸಿದ್ದಾರೆ. ಆಗ, ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೆದುಳು ನಿಷ್ಕ್ರಿಯಗೊಂಡಿರುವುದು ವೈದ್ಯರಿಗೆ ತಿಳಿದು ಬಂದಿದೆ.
ವೈದ್ಯರು ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಪೋಷಕರಿಗೆ ಪರಿಸ್ಥಿತಿಯನ್ನು ವಿವರಿಸಿ ಆ ಮಗುವಿನ ಹೃದಯವನ್ನು ದಾನವಾಗಿ ಪಡೆದಿದ್ದಾರೆ. ಬಳಿಕ, ರಿಸ್ಟ್ರಿಕ್ಟಿವ್ ಕಾರ್ಡಿಯೋ ಮಯೀಪತಿ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕನಿಗೆ ಹೊಸ ಹೃದಯ ಅಳವಡಿಸಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು ಎರಡು ತಿಂಗಳ ಚೇತರಿಕೆಯ ನಂತರ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು ಈಗ ಮಗು ಲವಲವಿಕೆಯಿಂದ ಇದ್ದು, ಆಹಾರ ಸೇವನೆ ಮತ್ತು ತೂಕ ವೃದ್ಧಿಯಲ್ಲಿ ಚೇತರಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.