ಹಾವೇರಿ : ಅಪಘಾದಲ್ಲಿ ಮೃತಪಟ್ಟ ತಮ್ಮ ಮಗನ ನೆನಪಿಗಾಗಿ ಪೋಷಕರು ಆತನ ಜನ್ಮದಿನದಂದು ಗೋಶಾಲೆ ತೆರೆದು ಒಂದು ವರ್ಷದ ಸಂಭ್ರಮ ಆಚರಣೆ ಮಾಡಿರುವುದು ಹಾವೇರಿಯಲ್ಲಿ ವರದಿಯಾಗಿದೆ.
ಅನಿಲ್ ಮತ್ತು ಸಂಗೀತಾ ಶೇಟ್ ದಂಪತಿಗೆ ಇಬ್ಬರು ಮಕ್ಕಳು. ಆದರೆ ಕಳೆದ ವರ್ಷ ಮಗ ಸಂದೇಶ ಅಪಘಾತದಲ್ಲಿ ಅಸುನೀಗಿದ್ದರು. ಇದರಿಂದ ತೀವ್ರ ದುಃಖಿತರಾದ ದಂಪತಿ, ಮಗನ ನೆನಪಿಗಾಗಿ ಕಳೆದ ವರ್ಷ ಆತನ ಜನ್ಮದಿನದಂದು ‘ಸಂದೇಶ’ ಎಂಬ ಗೋಶಾಲೆ ತೆರೆದಿದ್ದರು.
ಗಾಂಧಿಪುರ ಗ್ರಾಮದ ಹೊರವಲಯದಲ್ಲಿ ಸುಮಾರು ಒಂದೆಕರೆ ಜಮೀನು ಖರೀದಿಸಿ ವಿಶಾಲವಾದ ಗೋಶಾಲೆ ತೆರೆದಿದ್ದರು. ಒಂದು ಹಸುವಿನಿಂದ ಆರಂಭವಾದ ಗೋಶಾಲೆಗೆ ಇದೀಗ ಒಂದು ವರ್ಷ ಪೂರೈಸಿದ್ದು, ಈಗ ಇಲ್ಲಿ 38 ಹಸುಗಳಿವೆ. ಅನಾಥ, ಗಾಯಗೊಂಡ ಹಸುಗಳನ್ನು ಇಲ್ಲಿ ಸಾಕಲಾಗುತ್ತಿದೆ. ದಿನದಿಂದ ದಿನಕ್ಕೆ ಹಸುಗಳ ಸಂಖ್ಯೆ ಹೆಚ್ಚುತ್ತಿದ್ದು, ನಿತ್ಯ ಗೋಶಾಲೆಗೆ ಬರುವ ದಂಪತಿ ಹಸುಗಳಿಗೆ ಮೇವು, ನೀರು ಕುಡಿಸುತ್ತಾರೆ.
“ಯಾವಾಗ ಮುಂಜಾನೆ ಆಗುತ್ತೆ, ಯಾವಾಗ ಗೋಶಾಲೆಗೆ ಹೋಗುತ್ತೇನೆ, ಯಾವಾಗ ನನ್ನ ಮಗನನ್ನು ಕಾಣುತ್ತೇನೆ ಎನ್ನುವ ಕಾತುರತೆ ನನ್ನಲ್ಲಿ ಮನೆ ಮಾಡಿದೆ. ಗೋಶಾಲೆಯಲ್ಲೇ ನನ್ನ ಮಗನನ್ನು ನಾನು ಕಾಣುತ್ತಿದ್ದು, ಇದನ್ನು ಬಿಟ್ಟು ಮನೆಗೆ ಹೋಗಲು ಮನಸ್ಸೇ ಆಗದು. ಮಗ ಸಂದೇಶನ ತೊಟ್ಟಿಲಂತೆ ಈ ಗೋಶಾಲೆ ನನಗೆ ಭಾಸವಾಗುತ್ತಿದೆ. ಇಲ್ಲಿರುವ ಹಸುಗಳೆಲ್ಲವೂ ನನ್ನ ಮಕ್ಕಳಂತೆ” ಎಂದು ಮೃತ ಸಂದೇಶ ಅವರ ತಾಯಿ ಭಾವನಾತ್ಮಕ ಮಾತುಗಳನ್ನು ಹಂಚಿಕೊAಡಿದ್ದಾರೆ.