ಚಿಕ್ಕಮಗಳೂರು: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಉಡುಪಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಿಂದ ನಕ್ಸಲಿಸಂಗೆ ಸೇರಿದ ವಿಕ್ರಂ ಗೌಡನ ಹಿನ್ನೆಲೆ ಇಲ್ಲಿದೆ.
ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿರೋಧಿಸಿ ನಕ್ಸಲ್ ಚಳುವಳಿ ಹುಟ್ಟಿಕೊಂಡಿತ್ತು. ಆ ಸಂದರ್ಭದಲ್ಲಿ ನಕ್ಸಲ್ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ, ನಂತರದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಕಳೆದ 18 ವರ್ಷಗಳಿಂದ ಇದೇ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ವಿಕ್ರಂ ಗೌಡನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲೇ 13 ಪ್ರಕರಣ ದಾಖಲಾಗಿದ್ದವು. ಕರ್ನಾಟಕ ತಮಿಳುನಾಡು, ಕೇರಳದ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು.
ನಕ್ಸಲರ ಪತ್ತೆಗೆ ಪೋಲಿಸ್ ಇಲಾಖೆ ಹತ್ತು ವರ್ಷಗಳ ಹಿಂದೆಯೇ ನಗದು ಬಹುಮಾನ ಘೋಷಣೆ ಮಾಡಿತ್ತು. ವಿಕ್ರಂ ಗೌಡ, ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ, ಸುಂದರಿ ಪತ್ತೆಗೆ 5 ಲಕ್ಷ ಬಹುಮಾನ ಘೋಷಿಸಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯನ್ನು ವಿರೋಧಿಸಿ ಆ ಸಂದರ್ಭದಲ್ಲಿ , ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.
ನಂತರ ಕರ್ನಾಟಕದ ವಿವಿಧ ಭಾಗಗಳಲ್ಲಿ ದಶಕಗಳ ಕಾಲ ಈ ನಕ್ಸಲ್ ತಂಡ ಆತಂಕ ಸೃಷ್ಟಿ ಮಾಡಿತ್ತು. ಆದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ಹೆಚ್ಚಿನ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಪಕ್ಕದ ರಾಜ್ಯ ಕೇರಳಕ್ಕೆ ನಕ್ಸಲರು ಸ್ಥಳಾಂತರಗೊಂಡಿದ್ದರು.
ನಕ್ಸಲ್ ನಿಗ್ರಹ ಕಾರ್ಯಾಚರಣೆ ಕೇರಳದಲ್ಲಿ ಚುರುಕುಗೊಂಡ ಹಿನ್ನಲೆ ಅಲ್ಲಿಂದ ಕಾಲ್ಕಿತ್ತಿದ್ದ ನಕ್ಸಲರು, 2 ತಿಂಗಳುಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದರು. ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ಸಂಬಂಧ ಸಭೆ ನಡೆಸಿ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಕ್ಸಲ್ ಚಟುವಟಿಕೆಯನ್ನು ಬಿರುಸುಗೊಳಿಸಿದ್ದರು. ಹೀಗಾಗಿ ಜಿಲ್ಲೆಯ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು.
ಕೆಲ ದಿನಗಳ ಹಿಂದೆ ಕಾರ್ಕಳ, ಹೆಬ್ರಿ ಪರಿಸರದಲ್ಲಿ ಕೂಂಬಿಂಗ್ ತೀವ್ರಗೊಳಿಸಿದ್ದ ಎಎನ್ಎಫ್ , ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ನನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದೆ.