ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು‌ ಯುವತಿಯರು ದುರ್ಮರಣ: ಉಳ್ಳಾಲದ ರೆಸಾರ್ಟ್ ನಲ್ಲಿ ನಡೆಯಿತು ‌ದುರ್ಘಟನೆ‌:

 

 

 

ಮಂಗಳೂರು:  ಈಜುಕೊಳದಲ್ಲಿ  ಮೂವರು ಯುವತಿಯರು ಮುಳುಗಿ ಮೃತಪಟ್ಟ ದಾರುಣ  ಘಟನೆ ಉಳ್ಳಾಲ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ.

ಮೈಸೂರು ಕುರುಬರಹಳ್ಳಿ ನಿವಾಸಿ ನಿಶಿತಾ ಎಂ.ಡಿ (21), ಮೈಸೂರು ರಾಮಾನುಜ ರಸ್ತೆ ಕೆ‌.ಆರ್.ಮೊಹಲ್ಲಾ ನಿವಾಸಿ ಪಾರ್ವತಿ ಎಸ್. (20),
ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್. (21) ಸಾವನ್ನಪ್ಪಿರುವ ಯುವತಿಯರು ಎಂದು ಗುರುತಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ವಾಸ್ಗೊ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದ್ದು .
ಯುವತಿಯರು ಬೀಚ್​ ಪ್ರವಾಸಕ್ಕೆಂದು ಮೈಸೂರಿನಿಂದ ಉಳ್ಳಾಲಕ್ಕೆ ಶನಿವಾರ ಆಗಮಿಸಿ, ರೆಸಾರ್ಟ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದಾರೆ. ಇದರ ವಿಡಿಯೋ ಸೆರೆ ಹಿಡಿಯಲು ತಮ್ಮ ಮೊಬೈಲ್​ ಅನ್ನು ರೆಕಾರ್ಡ್ ಮೋಡ್‌ನಲ್ಲಿಟ್ಟಿದ್ದರು. ಮೂವರು ಯುವತಿಯರು ಕೊಳಕ್ಕೆ ಇಳಿಯುತ್ತಾರೆ. ಒಬ್ಬಾಕೆ ಟ್ಯೂಬ್​ ತೆಗೆದುಕೊಳ್ಳಲು ಸ್ವಲ್ಪ ಮುಂದಕ್ಕೆ ತೆರಳಿದ್ದು, ಈ ವೇಳೆ ನೀರಿನಲ್ಲಿ ದಿಢೀರ್‌ ಒದ್ದಾಡಿದ್ದಾಳೆ. ಈ ವೇಳೆ ರಕ್ಷಿಸಲು ಮತ್ತೊಬ್ಬಾಕೆ ಮುಂದೆ ಹೋಗಿ ಹಿಡಿಯುತ್ತಿದ್ದಂತೆ ಆಕೆಯೂ ನೀರಿನಿಂದ ಮೇಲೆ ಬರಲಾರದೇ ಒದ್ದಾಡಿದ್ದಾಳೆ. ಈ ವೇಳೆ ಮೂರನೇ ಯುವತಿ ಕೂಡ ಅವರಿಬ್ಬರ ರಕ್ಷಣೆಗೆ ತೆರಳಿದ್ದು ಆಕೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಯುವತಿಯರು ಈಜುಕೊಳದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಡಿಯೋ ರೆಸಾರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ರೆಸಾರ್ಟ್​​​​ ಸ್ಥಳೀಯರಾದ ಮನೋಹರ್ ಎಂಬವರಿಗೆ ಸೇರಿದ್ದಾಗಿದೆ​​ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಳ್ಳಾಲ ಪೊಲೀಸ್​​ ಇನ್ಸ್‌ಪೆಕ್ಟರ್​ ಹೆಚ್.ಎನ್.ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!