ಬೆಂಗಳೂರು: ಕಂಬಳಕ್ಕೆ ಅನುಮತಿ ನೀಡಿದಂತೆ ಪೇಟಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ (ಅ,23ಕ್ಕೆ) ಮುಂದೂಡಿದೆ.
ಅರ್ಜಿದಾರರ ಪರ ವಕೀಲರು, ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಪ್ರದಾಯಿಕವಾಗಿ ಆಚರಣೆ ಮಾಡುವ ಪದ್ಧತಿ ಶತಮಾನಗಳಿಂದ ನಡೆದು ಬಂದಿದೆ. 2023ರಲ್ಲಿ ಮೊದಲ ಬಾರಿಗೆ ರಾಜಧಾನಿಯಲ್ಲಿ ಕಂಬಳ ಆಯೋಜನೆ ಮಾಡಲಾಯಿತು. ಈ ಬಾರಿ ಅ.26ಕ್ಕೆ ಕಂಬಳ ಆಯೋಜನೆಗೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನೂರಾರು ಕಿ.ಮೀ. ದೂರದ ಭಾಗಗಳಿಂದ ಕೋಣಗಳನ್ನು ಟ್ರಕ್ ಗಳ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ವಾಣಿಜ್ಯ ಉದ್ದೇಶದೊಂದಿಗೆ ಪ್ರಾಣಿಗಳನ್ನು ಈ ರೀತಿ ಹಿಂಸಿಸುವುದು ಒಪ್ಪುವಂತಹದಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಪರ್ಧೆಗೆ ಅವಕಾಶ ನೀಡದಂತೆ ವಿಚಾರಣೆ ವೇಳೆ ಮನವಿ ಮಾಡಿದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ