ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಗಾರು ಮಳೆ ಬಿಡುವು ಪಡೆದುಕೊಂಡಿದ್ದು ಆದರೆ ಹಿಂಗಾರಿನ ಆರ್ಭಟ ಹೆಚ್ಚಾಗಿದೆ. ಈ ಮಧ್ಯೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತಗಳು ತೀವ್ರ ಸ್ವರೂಪ ಪಡೆಯುತ್ತಿದ್ದು, ಪರಿಣಾಮ ರಾಜ್ಯದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆ ನೀಡಿದೆ.
ಅಕ್ಟೋಬರ್ 17 ಮತ್ತು 18 ರಂದು 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಪ್ರಮುಖವಾಗಿ ಅಕ್ಟೋಬರ್ 17 ರ ಬೆಳಗ್ಗೆ 8.30 ರಿಂದ ಅಕ್ಟೋಬರ್ 18 ರ ಬೆಳಗ್ಗೆ 8.30 ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಚಂಡಮಾರುತದ ಪರಿಚಲನೆಯ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ ಎಸ್ ಪಾಟೀಲ್ ಅವರು, ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ಇದ್ದು, ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದಲ್ಲಿದೆ. ಮುಂದಿನ ದಿನಗಳಲ್ಲಿ ನೈಋತ್ಯಕ್ಕೆ ವಾಲಲಿದೆ. ಇದು ಅಕ್ಟೋಬರ್ 15 ರ ನಂತರ, ಮುಂದಿನ 2 ದಿನದಲ್ಲಿ ಪಶ್ಚಿಮ-ವಾಯುವ್ಯವಾಗಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದಿದ್ದಾರೆ.
ಮಧ್ಯ ಅರೇಬಿಯನ್ ಸಮುದ್ರದ ಮೇಲಿನ ವಾಯುಭಾರ ಕುಸಿತ ದಕ್ಷಿಣ ಕೇರಳದಾದ್ಯಂತ ಮತ್ತು ಕೊಮೊರಿನ್ ಪ್ರದೇಶದವರೆಗೆ ಹಾಗೂ ತಮಿಳುನಾಡಿನಲ್ಲಿ ಚಂಡಮಾರುತದ ರೂಪ ಪಡೆದಿದ್ದು, 3.1 ಕಿ.ಮೀ ಮತ್ತು 5.8 ಕಿ.ಮೀ ನಡುವೆ ಸರಾಸರಿ ಸಮುದ್ರ ಮಟ್ಟದಲ್ಲಿ ಮುಂದುವರೆಯುತ್ತಿದೆ ಎಂದು ತಿಳಿಸಿದ್ದಾರೆ.
ಚಂಡಮಾರುತಗಳ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಕರಾವಳಿಯಲ್ಲಿ ಸಾಮಾನ್ಯವಾಗಿದೆ ಮತ್ತು ಉತ್ತರ ಒಳನಾಡಿನಲ್ಲಿ ಕಡಿಮೆಯಿದೆ ಎಂದಿದ್ದಾರೆ.