ಬೆಳಗಾವಿ: ಮುಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟಿದ್ದಾರೆ.
“ರಾಜಕೀಯ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವೂ ಕೂಡ ರಾಜಕೀಯ ಮಾಡುತ್ತಿದ್ದು, ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ಇದೊಂದು ಕಾನೂನು ಪ್ರಕ್ರಿಯೆ. ತನಿಖೆ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿಗಳೇ ಘಂಟಾಘೋಷವಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ, ಜಗ್ಗಲ್ಲ, ಬಗ್ಗಲ್ಲ. ಕಾನೂನು ಪ್ರಕಾರ ತನಿಖೆ ಏನು ಆಗಬೇಕು ಅದು ಆಗುತ್ತದೆ” ಎಂದು ಹೇಳಿದರು.
“ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದ ಅವರು 6 ಸಾವಿರ ಕೋಟಿ ಮೊತ್ತದ ಎಲೆಕ್ಟ್ರೋ ಬಾಂಡ್ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿನೋಟಿಫೈ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ರಾಜೀನಾಮೆ ನೀಡಲಿ, ನಂತರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಬಿಜೆಪಿಯವರು ಮಾತನಾಡಲಿ” ಎಂದು ಕಿಡಿಕಾರಿದ್ದಾರೆ.